ನಾನೇಕೆ (ಕನ್ನಡದಲ್ಲಿ) ಬರೆಯುತ್ತೇನೆ?

Hamsanandi
3 min readOct 31, 2019

--

(ಒಂದೆರಡು ವರ್ಷಗಳ ಹಿಂದೆ, ವಿಶ್ವವಾಣಿ ಪತ್ರಿಕೆಯಲ್ಲಿ ಈ ಪ್ರಶ್ನೆಗಳನ್ನು ಕೇಳಿ, ಅದಕ್ಕೆ ನಾನು ಬರೆದ ಉತ್ತರಗಳನ್ನು ಪ್ರಕಟಿಸಿದ್ದರು. ಆ ಅಂಕಣದಲ್ಲಿ ಇನ್ನೂಹಲವಾರು ಕನ್ನಡ ಬರಹಗಾರರು ಇವೇ ಪ್ರಶ್ನೆಗಳಿಗೆ ಬರೆದ ಉತ್ತರಗಳೂ, ಅವರವರ ದೃಷ್ಟಿಕೋನವೂ ಪ್ರಕಟವಾಗಿದ್ದವು. ನಾನು ಬರೆದ ಉತ್ತರದ ಪೂರ್ಣಪಾಠ ಇಲ್ಲಿದೆ. ಕರ್ನಾಟಕ ರಾಜ್ಯೋತ್ಸವದ ಸಮಯದಲ್ಲಿ ಇದನ್ನು ಮಿತ್ರರೊಡನೆ ಹಂಚಿಕೊಳ್ಳೋಣ ಎನ್ನಿಸಿತು)

ಪ್ರಶ್ನೆ: ನಿಮ್ಮ ಬರೆವಣಿಗೆ ಹಿಂದಿರುವ ಪ್ರೇರಣೆಗಳೇನು? ಯಾಕೆ ಬರೆಯಬೇಕು ಎನ್ನಿಸುತ್ತದೆ? ಯಾರಿಗಾಗಿ ಬರೆಯಬೇಕು ಎನ್ನಿಸುತ್ತದೆ?

ನನ್ನ ಮಟ್ಟಿಗೆ ಹೇಳುವುದಾದರೆ, ಬರೆಯೋಕೆ ಸಾಧ್ಯ ಅನ್ನಿಸೋದರಿಂದ ಬರೆಯಬೇಕು ಅನ್ನಿಸುತ್ತೆ. ಜೊತೆಗೆ ಏನಾದರೂ ಒಳ್ಳೆಯದನ್ನ ಓದಿದಾಗ, ಆಗುವ ಸಂತೋಷದಿಂದ ಅದರ ಬಗ್ಗೆಯೋ, ಅಥವಾ ಅದರ ರೀತಿಯಲ್ಲೇ ಮತ್ತೇನನ್ನಾದರೂ ಬರೆಯಬೇಕು ಅಂತ ಅನ್ನಿಸುತ್ತೆ. ಇನ್ನೊಂದು ಬಗೆಯಲ್ಲಿ ನೋಡಿದರೆ ಓದಿದ್ದನ್ನು ಮರೆಯಬಾರದು, ಅಥವಾ ಅದನ್ನ ಮತ್ತೆ ಮತ್ತೆ ಮೆಲುಕು ಹಾಕುವಂತಿರಬೇಕು ಎಂಬ ಕಾರಣಕ್ಕೂ ನಾನು ಬರೆಯುತ್ತೇನೆ. ನಾನು ಈಚೆಗೆ ಬರೆಯುತ್ತಿರುವುದರಲ್ಲಿ ಹೆಚ್ಚಿನವು ಅನುವಾದಗಳಾಗಿರುವುದಕ್ಕೆ ಅದೇ ಕಾರಣ ಎನ್ನಬಹುದು. ಈ ನೆಲೆಯಿಂದ ನೋಡುವುದಾದರೆ, ಮೊದಲು ನಾನು ನನಗಾಗಿಯೇ ಬರೆಯುತ್ತೇನೆ. ಹಾಗೆಂದು ಓದುಗರನ್ನು ನಾನು ಲೆಕ್ಕಿಸುವುದಿಲ್ಲ ಅಂತಲ್ಲ. ಯಾವ ಬರಹಗಾರನಿಗಾದರೂ ತಾನು ಯೋಚಿಸಿದ್ದನ್ನು, ತಾನು ಬರೆದದ್ದನ್ನು ಹಲವರಿಗೆ ಮುಟ್ಟಿಸಲೇಬೇಕೆಂಬ ಬಯಕೆ ಇದ್ದೇ ಇರುತ್ತದೆ. ಆದರೆ ನಾನು ಬರೆದದ್ದು ನನಗೇ ತೃಪ್ತಿ ಆಗದಿದ್ದರೆ, ಬೇರೆಯವರನ್ನು ಅದು ಹೇಗೆ ತಾನೇ ಮುಟ್ಟೀತು? ಒಂದು ವೇಳೆ ಮುಟ್ಟಿದರೂ ಅದರಿಂದ ನನಗೆ ಯಾವ ಮಹಾ ಸಂತೋಷವಾದೀತು?

ಪ್ರಶ್ನೆ: ಪ್ರಸ್ತುತ ಸಂದರ್ಭದಲ್ಲಿ ಪ್ರಶಸ್ತಿ, ಪ್ರಶಂಸೆ, ಪ್ರಕಟಣೆ, ವಿಮರ್ಶೆಗಳು ಒಬ್ಬ ಲೇಖಕ/ಲೇಖಕಿಯ ಸೃಜನಶೀಲತೆಯನ್ನು ಎಷ್ಟರ ಮಟ್ಟಿಗೆ ಪೋಷಿಸುತ್ತಿವೆ, ಪ್ರಭಾವಿಸುತ್ತಿವೆ? ಒಂದು ಕೃತಿಯ ಗುಣಮಟ್ಟ ಅಥವಾ ಸೃಜನಶೀಲತೆ ಇವೆಲ್ಲವುಗಳಿಂದ ನಿರ್ಧಾರವಾಗುತ್ತದಾ?

ಬರಹದ ಆಳಕ್ಕೂ, ಅದು ತರುವ ಅನುಭವಕ್ಕೂ (ಬರೆಯುವವನಿಗೆ ಮತ್ತೆ ಓದುಗನಿಗೆ) ಹಾಗೂ ಅದಕ್ಕೆ ಸಿಕ್ಕುವ ಮೆಚ್ಚುಗೆಗೂ ನೇರ ಸಂಬಂಧ ಇರುವಂತಿಲ್ಲ. ಅದರಲ್ಲೂ ನನ್ನಂತಹ ಹೆಚ್ಚಾಗಿ ಅಂತರಜಾಲದಲ್ಲಿ ಬರೆಯುವ, ಅಥವಾ ಹವ್ಯಾಸಕ್ಕಾಗಿ ಬರಹಗಾರರಿಗಂತೂ ಇದು ಸತ್ಯ. ಪುಸ್ತಕ ಪ್ರಕಟಣೆಗೆ ಕೈಹಾಕುವ ಛಲವೇ ಆಗಲಿ, ಅದಕ್ಕೆ ಬೇಕಾದ ಪರಿಕರಿಗಳೇ ಆಗಲಿ ಎಲ್ಲರಿಗೂ ಕೈಹತ್ತುವುದಲ್ಲ. ಹಾಗಾಗಿ ಪ್ರಶಸ್ತಿ, ಹಾಗೂ ವಿಮರ್ಶೆಗಳೆರಡೂ ದೊರೆಯುವ ಸಾಧ್ಯತೆ ಕಡಿಮೆ. ಇನ್ನು ಅಂತರಜಾಲ ಮಾಧ್ಯಮದಲ್ಲಿ ನಮ್ಮ ಬರಹಕ್ಕೆ ನಾವೇ ಮಾರುಕಟ್ಟೆ ಮಾಡಿಕೊಳ್ಳಲು ಸಾಧ್ಯವಾದರೂ, ಪ್ರತೀ ಬರಹಗಾರ ಬಯಸುವಂಥ ಓದುಗರು ಇಲ್ಲಿ ಸಿಗುತ್ತಾರೆ ಎಂದು ಹೇಳಲಾಗದು. ಹೆಚ್ಚಾಗಿ ಮಾಹಿತಿ ಬರಹಗಳಿಗೆ ಅಥವಾ ಎಲ್ಲರಿಗೂ ಇಷ್ಟವಾಗಬಲ್ಲ ಮಟ್ಟದಲ್ಲಿರುವ ಬರಹಗಳಿಗೆ, ಅಥವಾ ಈಗಾಗಲೇ ಹೆಸರು ಮಾಡಿರುವಂಥ ಲೇಖಕರಿಗೆ ದೊರಕುವ ಪ್ರತಿಕ್ರಿಯೆಗಳು ಎಲ್ಲ ಬರಹಗಾರರಿಗೂ ದೊರಕವು. ಕೆಲವು ಬರಹಗಳಿಗೆ ಓದುಗರ ಪೂರ್ವಸಿದ್ಧತೆಯೂ ಅಗತ್ಯವಾದ್ದರಿಂದ ಕೃತಿಯ ಗುಣಮಟ್ಟ ಚೆನ್ನಾಗಿದ್ದರೆ ತಾವಾಗಿಯೇ ಓದುಗರು ಬರುತ್ತಾರೆ ಎನ್ನುವ ಮಾತನ್ನು ನೆಚ್ಚಲಾಗದು. ಹಾಗೇ ಅದು ಬರಹಗಾರನನ್ನು ಪೋಷಿಸಿ ಪ್ರಭಾವಿಸುತ್ತವೆ ಎಂದು ಹೇಳುವುದೂ ಕಷ್ಟವಾಗುತ್ತದೆ.

ಪ್ರಶ್ನೆ: ಬರೆದ ತಕ್ಷಣ ಪ್ರತಿಕ್ರಿಿಯೆಯ ನಿರೀಕ್ಷೆ, ಆತುರ, ಜನಪ್ರಿಯತೆಯ ಹಂಬಲ, ಪ್ರಶಸ್ತಿಗಳಿಗಾಗಿ ಪೈಪೋಟಿ ಏನೆಲ್ಲ ನಡೆಯುವ ಇಂದಿನ ದಿನಮಾನಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ನನ್ನಂತಹ ಬರಹಗಾರರು ನೆಚ್ಚಿಕೊಂಡಿರುವ ಬ್ಲಾಗ್, ಫೇಸ್ ಬುಕ್ ಮೊದಲಾದ ಕಡೆಗಳಿಂದ ಕನ್ನಡದ ವಿಸ್ತಾರವಾದ ಓದುಗರನ್ನು ತಲುಪಲು ಇನ್ನೂ ಸಾಧ್ಯವಾಗಿರುವುದು ಒಂದು ನಿರಾಶಾದಾಯಕ ವಿಷಯವೇ ಸರಿ. ಓದುಗದೊರೆಗಳು ಇಂದಿನ ಕಾಲದಲ್ಲೂ, ಪತ್ರಿಕೆಯಲ್ಲಿ ಪ್ರಕಟವಾದದ್ದು, ಮತ್ತೆ ಅಲ್ಲಿ ಪ್ರಕಟವಾದ ಬರಹಗಾರರು ಮಾತ್ರ ಉತ್ತಮ ಗುಣಮಟ್ಟಹೊಂದಿದವರು ಎಂಬ ಮನಸ್ಥಿತಿ ಹೊಂದಿದ್ದಾರೆಂಬುದು ಸುಳ್ಳಲ್ಲ. ಅದೇ ಸಮಯದಲ್ಲಿ, ಇದೇ ನಾಣ್ಯದ ಇನ್ನೊಂದು ಮುಖವಾಗಿ ಅಂತರಜಾಲದಲ್ಲಿ ಆ ಕೂಡಲೆ ಪ್ರತಿಕ್ರಿಯೆ ದೊರೆಯಬಹುದಾದ ಕಾರಣದಿಂದ, ತಾವು ಬರೆದದ್ದೆಲ್ಲ ಬಹಳ ಬೆಲೆಯುಳ್ಳದ್ದೆಂಬ ತಪ್ಪು ಭಾವನೆಯ ಗಾಳಕ್ಕೆ ಸಿಲುಕದಂತೆ ಇರಲು ಬರಹಗಾರರೂ ಬಹಳ ಎಚ್ಚರವಹಿಸಬೇಕಾಗುತ್ತದೆ. ತಮ್ಮ ಬಾವುಟ ತಾವೇ ಹಾರಿಸಿಕೊಳ್ಳುವ ಭರದಲ್ಲಿ ಲೇಖಕರು ಅಧ್ಯಯನಪರತೆ ಅಥವಾ ಬೇಕಾದ ತಯಾರಿ ಇಲ್ಲದೇ ಬರೆಯಹೊರಡುತ್ತಿದ್ದಾರೆ ಎನ್ನುವುದು ಹಿತವಲ್ಲದ, ಆದರೆ ಈಗ ನಡೆಯುತ್ತಿರುವ ಸಂಗತಿ. ಈ ಸುಳಿಯೊಳಕ್ಕೆ ಬೀಳದಂತೆ ನಾನು ಆದಷ್ಟೂ ಪ್ರಯತ್ನಿಸಿದ್ದೇನೆ ಅನ್ನುವುದು ನನ್ನ ಮನಸ್ಸಿಗೆ ಸಮಾಧಾನ ತಂದಿರುವ ವಿಷಯ.

ಪ್ರಶ್ನೆ: ತಮ್ಮನ್ನು ತಾವು ಪ್ರೊಮೋಟ್‌ ಮಾಡಿಕೊಳ್ಳುವ ಇಂದಿನ ಟ್ರೆಂಡ್‌ ಕೃತಿಕಾರನ ಚಿಂತನಾಕ್ರಮ ಮತ್ತು ಅರಿವಿನ ಆಳಕ್ಕೆ ಧಕ್ಕೆ ತರುತ್ತದಾ?

ಬರಹಗಾರರು ಓದದೇ ಬರೆಯುವ ಚಾಳಿಗೆ ಬಿದ್ದು ಅಮೂಲ್ಯವಾದ ಜೀವನಾನುಭವ ಮತ್ತು ರಸಾನುಭವವನ್ನು ಕಳೆದುಕೊಳ್ಳುತ್ತಿದ್ದಾರೋ ಎಂಬ ಭಯ ನನಗೆ ಕಾಡುತ್ತದೆ. ಒಬ್ಬ ಸಂಸ್ಕೃತ ಲಾಕ್ಷಣಿಕ ಹೇಳಿರುವ ಮಾತು ನೆನಪಿಗೆ ಬರುತ್ತೆ — ‘ಕುತೋ ವಾ ನೂತನಂ ವಸ್ತುಃ”? ನಿಜವಾಗಿ ಹೊಸದಾದ ವಿಷಯ (ಒಬ್ಬ ಬರಹಗಾರನಿಗೆ) ಎಲ್ಲಿ ತಾನೇ ಸಿಗಲು ಸಾಧ್ಯ? ಏನಿದ್ದರೂ ತಾನು ನೋಡಿದ, ಓದಿದ, ಅನುಭವಿಸಿದ ಹಲವು ವಿಚಾರಗಳನ್ನು ತನ್ನ ಮನಸ್ಸಿನ ಮೂಸೆಯಲ್ಲಿ ತಿರುವಿ, ಅದನ್ನು ಓದುಗರ ಮುಂದಿಡಲು ಮಾತ್ರ ಸಾಧ್ಯ.ಹತ್ತು ಪುಟಗಳಷ್ಟು ವಿಚಾರ ತಲೆಯಲ್ಲಿದ್ದರೆ ಅದರಿಂದ ಭಟ್ಟಿಯಿಳಿಸಿ ಒಂದು ಪುಟದಷ್ಟು ಬರೆಯಲಾದೀತೇನೋ. ತಿಳಿದ ವಸ್ತು ಇರುವುದೇ ಒಂದು ಪುಟದಷ್ಟಿದ್ದು ಅದನ್ನು ಹಾಗೇ ಬರೆದರೆ, ಅದು ಜಾಳು ಜಾಳಾಗದೇ ಉಳಿದೀತೇ? ಹಾಗಾಗಿ ತಮ್ಮ ಚಿಂತನೆ, ಓದು, ಅರಿವಿನ ಹರಹನ್ನರಿಯದ ಬರಹಗಾರರು ಎಲ್ಲದರ ಬಗ್ಗೆಯೂ ತಮ್ಮದೊಂದು ನಿಲುವು ಇರಲೇ ಬೇಕೆಂಬ ರೀತಿಯಲ್ಲಿ ಬರೆಯ ಹೊರಡುವುದು ಹುಚ್ಚುತನವಾಗುತ್ತೆ. ಅಲ್ಲದೇ , ಬರಹಗಾರನೊಬ್ಬ ಸರ್ವಜ್ಞನಾಗಿರಬೇಕಿಲ್ಲ. ಸುತ್ತಮುತ್ತ ನಡೆಯುವ ಎಲ್ಲ ವಿಷಯಗಳಿಗೂ ಪ್ರತಿಕ್ರಿಯೆಯನ್ನು ತೋರಿಸುತ್ತ ಹೋಗಲೂಬೇಕಾಗಿಲ್ಲ ಎನ್ನುವುದು ನನ್ನ ನಂಬಿಕೆ.

ಪ್ರಶ್ನೆ: ಹಿರಿಯ ಬರಹಗಾರರು ಪ್ರೋತ್ಸಾಹಿಸುತ್ತಿಲ್ಲ ಎಂಬ ಬೇಸರವಿದೆಯಾ? ಇದರ ಅನಿವಾರ್ಯತೆ ಇದೆಯಾ?

ಹಿರಿಯ ಬರಹಗಾರರು ನಾನು ಬರೆದದ್ದನ್ನು ಓದಿ ಮೆಚ್ಚುವಂತಿದ್ದರೆ ಚೆನ್ನಿತ್ತು ಎನ್ನಿಸುತ್ತದೆ. ಆ ರೀತಿಯ ಪ್ರೋತ್ಸಾಹವೇನೂ ಸಿಕ್ಕಿಲ್ಲ ಎಂಬ ಬೇಸರ ಇದೆ. ಆದರೆ ಅದಕ್ಕೆ ಹಿರಿಯ ಬರಹಗಾರರನ್ನು ಜವಾಬ್ದಾರಿ ಮಾಡಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಸುಮಾರು ೮-೧೦ ವರ್ಷಗಳಿಂದ ಅನುವಾದಗಳನ್ನು ಮಾಡುತ್ತ ಬಂದಿದ್ದೇನೆ ( ಹೆಚ್ಚಾಗಿ ಸಂಸ್ಕೃತದಿಂದ ಮತ್ತೆ ಇಂಗ್ಲಿಷ್ ನಿಂದ). ಅದರ ಜೊತೆಗೆ ಹಲವಾರು ನಾಟಕಗಳನ್ನೂ, ವೈಚಾರಿಕ ಬರಹಗಳನ್ನೂ, ಹರಟೆಗಳನ್ನೂ, ಪ್ರಬಂಧಗಳನ್ನೂ, ಚಾರಿತ್ರಿಕ ಅಥವಾ ವೈಜ್ಞಾನಿಕ ಎಂಬ ಹಣೆಪಟ್ಟಿಗೆ ಒಳಪಡಬಲ್ಲ ವಸ್ತುಗಳ ಬಗ್ಗೆ, ಮತ್ತೆ ಸಂಗೀತ ಹಾಗೂ ಸಾಹಿತ್ಯದ ವಿಚಾರಗಳ ಬಗ್ಗೆಯೂ ಬರೆಯುತ್ತಿದ್ದೇನೆ. ಅಂದರೆ, ನನಗೆ ಯಾವ ವಿಷಯಗಳಲ್ಲಿ ಆಸಕ್ತಿ ಇದೆಯೋ, ಪ್ರವೇಶ ಇದೆಯೋ ಅಂತಹ ವಿಷಯಗಳ ಬಗ್ಗೆ ಮಾತ್ರ ನಾನು ಬರೆಯುತ್ತೇನೆ. ಈ ನನ್ನ ಬರಹಗಳಲ್ಲಿ ಮುದ್ರಣ ಮಾಧ್ಯಮದಲ್ಲಿ ಹೊರಬಂದಿರುವುದು ಕಡಿಮೆಯೇ. ಅಂತಹದರಲ್ಲಿ, ಅದರಲ್ಲೂ ಕನ್ನಡದ ಓದುಗರ ಮುಖ್ಯವಾಹಿನಿಗೆ ದೂರವಾಗಿ ದೂರದೇಶದಲ್ಲಿ ಕುಳಿತಿರುವುದರಿಂದ ಹಿರಿಯ ಬರಹಗಾರರು ನಾನು ಬರೆದದ್ದನ್ನು ಎಲ್ಲೋ ಫೇಸ್ ಬುಕ್ ನಲ್ಲಿಯೋ ಮತ್ತೊಂದೆಡೆಯೋ ಓದಿ, ಗುರುತಿಸಿ ಮೆಚ್ಚುತ್ತಾರೆಂಬ ಕಲ್ಪನೆಯನ್ನೂ ನಾನಿಟ್ಟುಕೊಂಡಿಲ್ಲ! ಅದರ ಅನಿವಾರ್ಯತೆ ಇದೆಯೇ? ಇಲ್ಲದಿರಬಹುದು. ಆದರೆ ಅಂಥ ಮೆಚ್ಚುಗೆ ದೊರೆತಿದ್ದರೆ, ಬರಹಗಾರನಿಗೆ ಅದರಿಂದ ಒಂದು ಕಾಲೂರಲು ಎಡೆ ಸಿಕ್ಕಂತಾಗುತ್ತದೆ ಅನ್ನುವುದು ಸತ್ಯವಾದ ಮಾತು. ಏಕೆಂದರೆ, ಎಲ್ಲಾ ಕ್ಷೇತ್ರಗಳಂತೆ ಇಲ್ಲೂ ಕೂಡ, ನೀವು ಎಷ್ಟು ಒಳ್ಳೆಯ ಕೆಲಸ ಮಾಡುತ್ತೀರ ಎನ್ನುವುದರ ಜೊತೆಗೆ ನಿಮಗೆ ಎಷ್ಟು ಜನ ಆ ಕ್ಷೇತ್ರದಲ್ಲೇ ಪ್ರಭಾವ ಬೀರಬಲ್ಲವರು ಪರಿಚಿತರಾಗಿದ್ದಾರೆ ಅನ್ನುವುದೂ ಲೆಕ್ಕಕ್ಕೆ ಬರುವ ಸಮಾಚಾರ.

ಪ್ರಶ್ನೆ: ಒಟ್ಟಾರೆ ಒಬ್ಬ ಬರಹಗಾರನ ಮನೋಭಾವ ಹೇಗಿರಬೇಕು ಎಂದು ನಿಮಗೆ ಅನ್ನಿಸುತ್ತೆ? ಒಬ್ಬ

ಬರಹಗಾರ ಒಂದು ಜೇನು ಹುಳುವಿನಂತಿರಬೇಕು. ‘ಕುತೋ ವಾ ನೂತನಂ ವಸ್ತುಃ’ — ಹೊಸ ವಿಷಯವೇ ಇಲ್ಲವಲ್ಲ ಎನ್ನುವುದನ್ನೇ ಒಂದು ತೊಂದರೆ ಎಂದು ನೋಡದೆ, ಅಲ್ಲಿಲ್ಲಿ ಸಿಕ್ಕ ಮಕರಂದವನ್ನು ಜೇನಾಗಿಸಬಲ್ಲ ಶಕ್ತಿಯಿರುವ ಜೇನಿನ ಹುಳುವಾಗಬೇಕು. ಅಂದರೆ ಅಲ್ಲಿಂದಿಷ್ಟು ಇಲ್ಲಿಂದಷ್ಟು ಎತ್ತಿ ಏನೋ ಒಂದನ್ನು ಬಡಿಸುವ ರೀತಿ ಅಂದುಕೊಳ್ಳಬೇಡಿ! ಮಕರಂದದ ಜೊತೆ, ಜೇನುಹುಳದ ಕೆಲಸವೂ ಸೇರಿ ತಾನೆ ಸವಿಯಾದ ಜೇನಾಗುವುದುಂಟೇ? ಒಬ್ಬ ಬರಹಗಾರನು ಬರೆದದ್ದು ನಾಲ್ಕು ಜನ ಓದಿ ಮೆಚ್ಚುವಂತಿರಬೇಕು. ಸಾವಿರ ಹೂವಿನ ಮಕರಂದವಿಲ್ಲದೇ ಜೇನಾಗುವುದುಂಟೇ? ಚೆನ್ನಾಗಿ ಓದದೇ ಒಳ್ಳೆಯ ಬರಹಗಾರನಾಗುವುದುಂಟೇ? ಬರೆಯುವ ವಿಷಯಗಳ ಎಲ್ಲ ಮಗ್ಗುಲುಗಳನ್ನೂ ನೋಡಿ, ವಿಚಾರ ಮಾಡಿ ಬರೆಯುವ ತಾಳ್ಮೆ, ವ್ಯವಧಾನ ಬರಹಗಾರನಿಗೆ ಇರಬೇಕು. ಬರೆಯುವ ವಿಷಯದ ಬಗ್ಗೆ ಪ್ರೀತಿ ಹೊಂದಿರಬೇಕು. ಬರೆದದ್ದನ್ನು ಎಲ್ಲರೂ ಒಪ್ಪಬೇಕೆಂಬ ಬಿಗುಮಾನವೂ ಇರಬಾರದು — ಇವೆಲ್ಲ ಕಷ್ಟಸಾಧ್ಯ ಎಂಬುದು ನಿಜವಾದರೂ, ಅಸಾಧ್ಯವಲ್ಲ. ಒಬ್ಬ ಬರಹಗಾರನ ನೆಲೆಯಲ್ಲಿ ಇವನ್ನು ಸಾಧಿಸಲು ಪ್ರಯತ್ನವನ್ನಂತೂ ಪಡಬಹುದಲ್ಲ!

-ಹಂಸಾನಂದಿ

--

--

Hamsanandi
Hamsanandi

Written by Hamsanandi

ಕನ್ನಡಿಗ,Chomayiphile,Bibliophile,Astrophile,BMKphile, Musicphile,Tyagarajaphile,Agatha-phile, Blogophile,Twitterphile and now a Playwright /play director :-P

No responses yet