The Lords of the Deccan: A Book Review

Hamsanandi
5 min readFeb 21, 2022

“The Lords of the Deccan” ಎಂಬ ಪುಸ್ತಕ ಇತ್ತೀಚೆಗೆ ಪ್ರಕಟವಾಗಿದೆ. ಇದನ್ನು ಬರೆದವರು ಹೊಸ ತಲೆಮಾರಿನ ಲೇಖಕ ಅನಿರುದ್ಧ್ ಕನಿಸೆಟ್ಟಿ. ದಕ್ಷಿಣ ಭಾರತದ ಅರಸುಮನೆತನಗಳಿಗೆ ನಮ್ಮ ಚರಿತ್ರೆಯಲ್ಲಿ ಸಿಗಬೇಕಾದ ಮಟ್ಟದ ಪ್ರಾಶಸ್ತ್ಯ ಸಿಕ್ಕಿಲ್ಲ ಎಂಬ ಕಾರಣಕ್ಕೆ ಈ ಪುಸ್ತಕ ಬರೆದೆ ಎಂದು ಅವರು ಮುನ್ನುಡಿಯಲ್ಲಿ ಹೇಳಿದ್ದಾರೆ. ಅದನ್ನು ನಾನೂ ಒಪ್ಪುತ್ತೇನೆ. ಕರ್ನಾಟಕದ ಅರಸುಮನೆತನಗಳಿಗೆ, ನಮ್ಮ ಶಾಲಾ ಕಾಲೇಜುಗಳ ಪಠ್ಯಪುಸ್ತಕಗಳಲ್ಲಿ ಸಿಗಬೇಕಾದ ಪರಿಚಯ ಸಿಕ್ಕಿಲ್ಲ. ಅದರಲ್ಲೂ, ಕರ್ನಾಟಕದಿಂದ ಹೊರಗಿನವರಿಗೆ, ನೂರಾರು ವರ್ಷ ಭಾರತದೇಶದ ಅರ್ಧದಷ್ಟು ಭಾಗವನ್ನು ತಮ್ಮ ಆಳ್ವಿಕೆಯಲ್ಲಿ ಇಟ್ಟುಕೊಂಡಿದ್ದ ಚಾಳುಕ್ಯ ರಾಷ್ಟ್ರಕೂಟ ಅರಸರ ವಿಷಯವೇ ತಿಳಿದಿರುವುದಿಲ್ಲ. ಇಂತಹ ಕೊರತೆಯನ್ನು ನೀಗಿಸಲು ಇದೊಂದು ಒಳ್ಳೇ ಪುಸ್ತಕವಾಗಬಹುದು ಎಂಬ ಆಶಾಭಾವನೆಯಲ್ಲಿ ಓದಲು ತೊಡಗಿದೆ.

The Lords of the Deccan

ದೊಡ್ಡ ದೊಡ್ಡ ಹೆಸರು ಮಾಡಿರುವರುಗಳಿಂದ ಶಿಫಾರಸ್ಸು ಪಡೆದಿರುವುದೂ ಕೂಡ, ನನಗೆ ಈ ಪುಸ್ತಕ ಒಂದು ಒಳ್ಳೇ ಅನುಭವ ತರುವ ಪುಸ್ತಕ ಆಗಬಹುದು ಎನ್ನಿಸಿದ್ದಕ್ಕೆ ಕಾರಣ. ಇದರ ಜೊತೆಗೆ, ೧೫ -೨೦ ವರ್ಷಗಳ ಹಿಂದೆ ಲೇಖಕರೊಬ್ಬರಿಗೆ ವಿಷಯಗಳನ್ನು ಒಟ್ಟುಮಾಡಲು , ಅವುಗಳ ಸತ್ಯಾಸತ್ಯತೆಯನ್ನು ವಿವೇಚಿಸಿ ಬರೆಯಲು ದೊರಕುತ್ತಿದ್ದ ಸಾಧನೆಗಳನ್ನು ನೋಡಿದರೆ, ಇವತ್ತು ಅಂತಹ ಕೆಲಸಕ್ಕೆ ಅನುಕೂಲ ಹತ್ತು ಪಟ್ಟು ಹೆಚ್ಚಿದೆ. ಅಂತರ್ಜಾಲದಲ್ಲಿ ಸಿಗುವ ಪುಸ್ತಕಗಳಾಗಲಿ, ವಿಷಯದಲ್ಲಿ ಪರಿಣತಿ ಪಡೆದವರನ್ನು ಸುಲಭವಾಗಿ ಸಂಪರ್ಕಿಸುವುದಾಗಲಿ ಇಂದು ಮುಂಚಿಗಿಂತ ಬಹಳ ಸುಲಭ. ಹಾಗಾಗಿ ಸಾಮಾನ್ಯವಾದ ಪಠ್ಯ ಪುಸ್ತಕಗಳಲ್ಲಿ ಕಾಣಸಿಗದ ವಿವರಗಳೂ, ಮತ್ತು ಹೊಳಹುಗಳೂ ಇಂತಹ ಹೊಸ ಪುಸ್ತಕಗಳಲ್ಲಿ ಸಿಗುವ ಸಾಧ್ಯತೆಯಂತೂ ಉಂಟು. ಕರ್ನಾಟಕದ ಚಾಲುಕ್ಯ, ರಾಷ್ಟ್ರಕೂಟರ ಕಾಲದ ಚರಿತ್ರೆಯನ್ನು, ಜೊತೆಗೆ ಸಮಕಾಲೀನರಾದ ಪಲ್ಲವ ಚೋಳ ರಾಜವಂಶಗಳನ್ನು ಬಣ್ಣಿಸುವ ಈ ಪುಸ್ತಕವನ್ನು ತುಂಬ ಆಸಕ್ತಿಯಿಂದ ಓದಿದ್ದಕ್ಕೆ ಅದೂ ಒಂದು ಮುಖ್ಯ ಕಾರಣ.

ಸಾಮಾನ್ಯ ಶಕ ೫೦೦-೫೫೦ರ ವೇಳೆಗೆ ಆರಂಭವಾಗುವ ಈ ಪುಸ್ತಕ ಹೆಚ್ಚು ಕಡಿಮೆ ೧೧೫೦ರವರೆಗೆ, ಎಂದರೆ ಐದಾರು ಶತಮಾನಗಳ ಬಗ್ಗೆ , ನಾಲ್ಕೈದು ರಾಜವಂಶಗಳ ಕಾಲದ ಚರಿತ್ರೆಯನ್ನು ಹೇಳಲು ಹೊರಟಿದೆ. ಈ ಕಾಲದ ದಕ್ಷಿಣ ಭಾರತವನ್ನು ತಿಳಿಸಬಹುದಾಗಿದ್ದ, ಈ ವಿಷಯದ ಬಗ್ಗೆ ಆಸಕ್ತರಿಗೆ ಕುತೂಹಲ ಮೂಡಿಸುವುದರ ಜೊತೆಗೆ ದಾಖಲೆಗಳ ಸಮೇತ ಚರಿತ್ರೆಯನ್ನು ತೋರಿಸಬಹುದಾಗಿದ್ದ ಈ ಪುಸ್ತಕವು ಲೇಖಕರ ಹಲವು ಪೂರ್ವಗ್ರಹಗಳಿಂದ ಸೋತಿದೆ. ಇಂತಹ ಪುಸ್ತಕಗಳನ್ನು (ಯಾವುದೇ ಭಾಷೆಯಲ್ಲಿ) ಬರೆಯಬೇಕಾದರೂ ಅಗತ್ಯವಾದ ದೇಶಭಾಷೆಗಳ ಪರಿಣತಿ ಲೇಖಕರಿಗೆ ಬಹುಶಃ ಇಲ್ಲದೇ ಹೋಗಿರುವುದು ಎದ್ದು ಕಾಣುತ್ತದೆ. ಈ ಕಾಲದ ಶಾಸನಗಳೂ, ಸಾಹಿತ್ಯಕೃತಿಗಳೂ ಸಂಸ್ಕೃತ, ಕನ್ನಡ, ತೆಲುಗು, ತಮಿಳು ಇತ್ಯಾದಿ ಹಲವು ಭಾಷೆಗಳಲ್ಲಿದ್ದು, ಈ ಭಾಷೆಗಳಲ್ಲಿ ಒಂದು ಮಟ್ಟದ ಪ್ರವೇಶವಿಲ್ಲದೇ, ಕೇವಲ ಇಂಗ್ಲಿಷ್ ಅನುವಾದಗಳಿಂದ ವಿಷಯ ಸಂಗ್ರಹಣ ಮಾಡಿರಬಹುದಾದ್ದರಿಂದ ಲೇಖಕರು ಹಲವೆಡೆ ದಾರಿ ತಪ್ಪಿದ್ದಾರೆ. ಅಲ್ಲದೇ ಹೆಚ್ಚಾಗಿ ಪಾಶ್ಚಾತ್ಯ ಭೂತಗನ್ನಡಿಯಿಂದ ನಮ್ಮ ದೇಶದ ಚರಿತ್ರೆಯನ್ನು ನೋಡುವ ಚಾಳಿಯಿಂದ, ಭಾರತೀಯ ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಪ್ರಸ್ತುತ ಲೇಖಕರು ಬೆಳೆಸಿಕೊಂಡಿರಬಹುದಾದ(?) ಅನಾದರ ಮತ್ತು ತಿರಸ್ಕಾರಗಳಿಂದ ಪುಸ್ತಕದ ಒಟ್ಟಾರೆ ಅನುಭವ, ಅಂತಹ ಒಳ್ಳೆಯದಾಗಿಲ್ಲ. ಇದರ ಜೊತೆಗೆ, ಎಷ್ಟೋ ಕಡೆಗಳಲ್ಲಿ ಢಾಳಾಗಿ ಕಾಣುವಂತೆ ತಪ್ಪುಗಳೂ ಇವೆ. ಪಾತ್ರೆಯಲ್ಲಿರುವ ಅನ್ನ ಬೆಂದಿದೆಯೋ ಇಲ್ಲವೋ ನಾಲ್ಕಗುಳು ನೋಡುವಂತೆ ಇಂತಹ ಕೆಲವು ಉದಾಹರಣೆಗಳನ್ನು ಇಲ್ಲಿ ಕೊಡುತ್ತೇನೆ. ಅದರ ನಂತರ, ನೀವೇ ಈ ಪುಸ್ತಕವನ್ನು ಓದಬೇಕೋ ಬೇಡವೋ ಎಂಬ ನಿರ್ಧಾರ ಮಾಡಿಕೊಳ್ಳಬಹುದು.

ಇಮ್ಮಡಿ ಪುಲಿಕೇಶಿಯ ಬಗ್ಗೆ ಬರೆಯುತ್ತಾ ಲೇಖಕರ ಈ ಸಾಲುಗಳನ್ನು ನೋಡಿ. ಕೆಲವು ಭಾಗಗಳನ್ನು ನಾನು ಎತ್ತಿ ತೋರಿಸಲು ದಪ್ಪ ಅಕ್ಷರಗಳಲ್ಲಿ ಬರೆದಿದ್ದೇನೆಃ

The little prince received the name Ereya, and probably participated in a series of loud rituals, apprearing before crowds on auspicious occasions of his first haircut, first birthday and so on. Such public rituals were a key source of political power in sixth-century India: they conferred the presitige and legitimacy crucial to establishing an individual’s position in socio-political pecking order. So these early rituals of Ereya’s life — with their chanting priests and offerings of clarified butter — established his high statis and declared to the world that he would head his familiy’s political network in the future.

ಇಲ್ಲಿ “loud rituals” ಎಂಬ ಹಣೆಪಟ್ಟಿಗೆ ಗುರಿಯಾಗಿರುವ ನಾಮಕರಣದಂತಹ ಸಮಾರಂಭವನ್ನು ನಮ್ಮ ದೇಶದಲ್ಲಿ ಅರಸರೇ ಆಗಲಿ, ಜನಸಾಮಾನ್ಯರೇ ಆಗಲಿ, ತಮ್ಮ ತಮ್ಮ ಮನೆಯ ಮಟ್ಟಿಗೆ, ನೆಂಟರಿಷ್ಟರ ಮಟ್ಟಿಗೆ, ಅಥವಾ ಇನ್ನೂ ಹೆಚ್ಚಿನ ಮಟ್ಟಿಗೆ , ತಮ್ಮ ಮಕ್ಕಳು ಹುಟ್ಟಿದಾಗ ಮಾಡುವುದು ಬೆಳೆದು ಬಂದ ಪದ್ಧತಿಯೇ ಅಲ್ಲವೇ? ಅಲ್ಲಿ “ಗೌರವ , ಪ್ರತಿಷ್ಠೆ ಹೆಚ್ಚಿಸಿ ಕೊಳ್ಳುವುದೇ ಆಗಲಿ, ಮೇಲು ಕೀಳಿನ ಸುದ್ದಿಯಾಗಲೀ” ಎಲ್ಲಿದೆ ?

ಇನ್ನೊಂದು ಕಡೆ ಬಾದಾಮಿಯಲ್ಲಿ ಚಾಲುಕ್ಯರು ಮೊದಮೊದಲು ಕಟ್ಟಿಸಿದ ದೇವಸ್ಥಾನಗಳ ಬಗ್ಗೆ ಬರೆಯುತ್ತಾ ಲೇಖಕರು ಹೀಗೆನ್ನುತ್ತಾರೆಃ “Then, the idea of building permanent shrines to ‘Hindu’ gods was somewhat new innovation”. ಆದರೆ, ಅದಕ್ಕೂ ಮುನ್ನೂರು ವರ್ಷಗಳ ಹಿಂದೆಯೇ ಗಂಗರು ತಲಕಾಡಿನಲ್ಲಿ ಕಟ್ಟಿಸಿರುವ ದೇವಾಲಯಗಳ ಅಡಿಪಾಯ ದೊರೆತಿರುವ ಹೊಸ ಸಂಶೋಧನೆಗಳು ಲೇಖಕರ ಕಣ್ಣಿಗೇ ಬಿದ್ದಿಲ್ಲದ ಹಾಗೆ ತೋರುತ್ತದೆ. ಸಾಮಾನ್ಯ ಓದುಗರಿಗೆ ಇಂತಹ ಹೊಸ ಉತ್ಖನನಗಳ ಬಗ್ಗೆ ತಿಳಿದಿಲ್ಲದಿರುವುದು ಸಹಜ. ಆದರೆ ಆ ವಿಷಯದಲ್ಲಿ ಪುಸ್ತಕ ಬರೆಯ ಹೊರಟಾಗ ಅದನ್ನು ತಿಳಿದಿರುವುದು ಅತ್ಯವಶ್ಯ.

ಅದೇ ಸಂದರ್ಭದಲ್ಲಿ ಮುಂದುವರೆಯುತ್ತಾ “But, orthodox Hinduism, even upto the early centuries CE ,had still relied primarily on Vedic rituals — expensive and difficult undertakings for kings .. … These rituals were performed in temporary altars, built specifically to perform a sacrifice and destroyed after”ಎಂದು ಮುಂತಾಗಿ ಬರೆಯುತ್ತಾರೆ. ಎಂದರೆ, ತಾತ್ಕಾಲಿಕವಾಗಿ ಹುಲ್ಲಿನ ಛಾವಣಿ ಹಾಕಿ, ಮರದ ಕಾಂಡಗಳನ್ನು ಕಂಬಗಳಾಗಿ ನಿಲ್ಲಿಸಿ ರಚಿಸಿರಬಹುದಾದ ಯಾಗಶಾಲೆಗಳಿಗಿಂತ, ಕಲ್ಲಿನಲ್ಲಿ ಕೆತ್ತಿಸಿದ, ನೂರಾರು ಶಿಲ್ಪಗಳನ್ನು ಹೊಂದಿರುವ, ಹಲ ವರ್ಷಗಳು ಕೆಲಸ ನಡೆದಿರಬಹುದಾಗಿದ್ದ ದೇವಾಲಯಗಳೇ ಕಡಿಮೆ ಖರ್ಚಿನವಾಗಿದ್ದವು ಎಂಬುದು ಲೇಖಕರ ಅಭಿಪ್ರಾಯವೇ? ಯಾಗ ಮೊದಲಾದುವುಗಳಲ್ಲಿ ದವಸ ಧಾನ್ಯಗಳನ್ನು ಪ್ರಾಣಿಗಳನ್ನು ಆಹುತಿ ಕೊಟ್ಟು ಆಹಾರದ ಸಮಸ್ಯೆ ಉಂಟಾಯಿತೆಂಬ ಕಾಗಕ್ಕ-ಗುಬ್ಬಕ್ಕನಂತಹ ಕಥೆಯನ್ನೇ ಲೇಖಕರೂ ಮುಂದುವರೆಸುತ್ತಿದ್ದಾರೆಂಬುದಕ್ಕೆ ಇದೊಂದು ಚಿಕ್ಕ ನಿದರ್ಶನವಷ್ಟೇ.

ಇನ್ನು ಹಲವೆಡೆ ಲೇಖಕರ ಕಲ್ಪನೆಯನ್ನೂ ಹರಿಬಿಟ್ಟಿರುವುದರಿಂದ, ಓದುಗರಿಗೆ ಯಾವುದು ಕಲ್ಪನೆ, ಯಾವುದು ಸಾಧಾರ ಎಂದು ತಿಳಿಯದೇ ಹೋಗುತ್ತದೆ. ಅದರಲ್ಲೂ ಈ ವಿಷಯದಲ್ಲಿ ಹೆಚ್ಚಿನ ಮಾಹಿತಿ ಇಲ್ಲದವರಿಗಂತೂ, ಪುಸ್ತಕದಲ್ಲಿ ಇರುವುದೆಲ್ಲ ಸತ್ಯ ಎಂದು ತಪ್ಪಾಗಿ ಭಾವಿಸುವ ಸಾಧ್ಯತೆಗಳಿವೆ. ಎಷ್ಟೋ ಚಲನಚಿತ್ರಗಳಲ್ಲಿ ನಾವು ಅರಸುವಂಶಗಳ ಬಗ್ಗೆ ನೋಡಿರುತ್ತೇವೆ — ಅಲ್ಲಿ ಇರುವುದನ್ನೆಲ್ಲ ಸತ್ಯ ಎಂದು ಭಾವಿಸಲಾಗುವುದಿಲ್ಲ. ಹಾಗೇ ಈ ಪುಸ್ತಕದಲ್ಲಿ ಕೂಡ ಹಲವು ಭಾಗಗಳು ಕಾಲ್ಪನಿಕವೇ ಆಗಿದೆ. ಕೆಲವೆಡೆ ಇತಿಹಾಸಕಾರರು ಊಹೆ ಮಾಡುವುದು ಉಂಟು, ಮಾಡಲೂ ಬೇಕಾಗುತ್ತದೆ, ಆದರೆ ಅಂತಹ ಊಹೆ ಮಾಡಿದಾಗ, ಅದನ್ನು ಇದು ಊಹೆ ಎಂದು ಹೇಳಲೂಬೇಕಾಗುತ್ತದೆ. ಉದಾಹರಣೆಗೆ ಚಲುಕ್ಯ ಎಂಬ ವಂಶದ ಹೆಸರು ಸಲಿಕೆ ಎಂಬ ಪದದಿಂದ ಬಂದಿದೆ ಎಂಬ ಊಹೆ ಇದೆ. ಆದರೆ ಅದು ಸಿದ್ಧವಾಗಿಲ್ಲ. ಲೇಖಕರು ಅದನ್ನು ಸ್ಥಾಪಿತ ಸತ್ಯದಂತೆಯೇ ಇಟ್ಟುಕೊಂಡು , ಮೊದಲನೆಯ ಪುಲಿಕೇಶಿ ಅಶ್ವಮೇಧ ಯಾಗವನ್ನು ಮಾಡಿದ ಬಗ್ಗೆ ಹೀಗೆ ಬರೆಯುತ್ತಾರೆಃ

“The Ashvamedha, its origins long forgotten, had been handed down orally through hundreds of generations…. It had never before been performed in this part of the Deccan, and to undertake it, the Chalke chief must have secured the services of foreign priests at great expense”

ಇಲ್ಲಿ ಗಮನಿಸಿ. ಒಂದು ಕಡೆ ಪುಲಿಕೇಶಿಯನ್ನು ಚಳ್ಕೆ ಮುಖಂಡ ಎಂದು ಕರೆದು, ಊಹೆಯನ್ನೇ ಸತ್ಯವಾಗಿಸಿದ್ದಾರೆ. ಇನ್ನೊಂದು ಕಡೆ ‘ಪರದೇಶೀ ಪೂಜಾರಿ’ ಗಳನ್ನು ಬಹಳ ಹಣ ಕೊಟ್ಟು ಕರೆಸಿದ್ದಿರಬೇಕೆಂಬ ಇನ್ನೊಂದು ಊಹೆ. ಇಂದಿನ ಗಡಿಗಳು, ಹಿಂದಿನ ಗಡಿಗಳೂ ಒಂದೇ ಅಲ್ಲ. ಅಂತೆಯೇ, ನೂರಾರು ಚಿಕ್ಕ ಚಿಕ್ಕ ರಾಜ್ಯಗಳಿದ್ದಾಗಲೂ ಭರತಖಂಡದಲ್ಲಿ ಒಂದು ಸಂಸ್ಕೃತಿಯ ಒಗ್ಗಟ್ಟು ಕೂಡ ಇದ್ದಿದ್ದು ಕೂಡ ತಿಳಿದ ವಿಷಯವೇ. ಆದರೆ ಲೇಖಕರು ಉದ್ದಕ್ಕೂ ಉತ್ತರ ಭಾರತ ಮತ್ತು ದಕ್ಷಿಣ ಭಾರತಗಳ ನಡುವೆ ಒಂದು ಕಂದಕವನ್ನು ( ಅದು ಇತ್ತೋ ಇಲ್ಲವೋ!) ಎತ್ತಿ ತೋರಿಸುವುದಕ್ಕೆ ಪ್ರಯತ್ನ ಮಾಡಿರುವುದಂತೂ ಉಂಟು.

ಪುಲಿಕೇಶಿಯ ಮನೆತನಕ್ಕೆ ಚಳ್ಕೆ, ಸಲಿಕೆ ಎಂಬ ಹೆಸರು ಇತ್ತು ಎಂಬ ಊಹೆಯಂತೆಯೇ ಸಲುಕಿ ಎಂಬ ಹೆಸರು ಬೇಲದ ಮರ ( ಸಂಸ್ಕೃತದಲ್ಲಿ ಸಲ್ಲಕಿ) ದ ಹೆಸರಿಂದ ಕೂಡ ಬಂದಿರಬಹುದು ಎಂಬ ಊಹೆಯನ್ನು ಕೆಲವು ವಿದ್ವಾಂಸರು ಮಾಡಿದ್ದಾರೆ. ಆದರೆ ಪ್ರಸ್ತುತ ಲೇಖಕರು ಇಂತಹ ಊಹೆ ಇರುವುದೆಂದು ಪ್ರಸ್ತಾಪ ಕೂಡ ಮಾಡುವುದಿಲ್ಲ. ಚಾಲುಕ್ಯರ ಮುಂಚಿನ ಕನ್ನಡ ರಾಜವಂಶವಾದ ಕದಂಬರೂ, ಒಂದು ಮರದ ಹೆಸರಿನಿಂದಲೇ ಪ್ರಖ್ಯಾತವಾಗಿರುವುದು, ಮತ್ತೆ, ಈಗಲೂ ಉತ್ತರ ಕರ್ನಾಟಕದಲ್ಲಿ ಅಂತಹ ಕುಲನಾಮಗಳು ಇರುವುದು (ಬೇವಿನ ಮರದ) ಇತ್ಯಾದಿ ನೋಡಿದಾಗ, ಈ ಊಹೆ ಕೂಡ ಸಾಧ್ಯವಾಗಿರಬಹುದಲ್ಲವೆ?

ಮತ್ತೊಂದು ಕಡೆ “Pulikeshin I , his sons, vassals and allies, watered battlefields with blood, constructed new irrigation systems, and fed their loot and agrarian produce into sacrificial flames and new temples”- ದೇವಾಲಯ ಸಂಸ್ಕೃತಿಯ ಬಗ್ಗೆ ಲೇಖಕರಿಗೆ ಇರುವ ದುರಭಿಪ್ರಾಯವನ್ನು ತೋರಿಸಲು, ಈ ಒಂದು ಸಾಲೇ ಸಾಕು. ಅಲ್ಲದೆ, ಇಂದು ನಮಗೆ ಯುದ್ಧದ ಬಗ್ಗೆ ಇರುವ ಅಭಿಪ್ರಾಯವನ್ನು ನಾವು ಸಾವಿರದೈನೂರು ವರ್ಷ ಹಿಂದಿನ ಚರಿತ್ರೆಗೆ ಅಷ್ಟು ನೇರವಾಗಿ ಹೊಂದಾಣಿಕೆ ಮಾಡಲು ಹೇಗೆ ಸಾಧ್ಯ?

ಸಂಸ್ಕೃತ, ಕನ್ನಡ ಮೊದಲಾದ ಭಾಷೆಗಳ ಪರಿಚಯ ಇಲ್ಲದೇ ಇರುವ ಲೇಖಕರು ಒಂದು ಕಡೆ “Aparna, ‘Leafless’ was the goddess of ancient forest-dwelling peoples” ಎನ್ನುತ್ತಾರೆ. ಇಂತಹ ಕಡೆಯಲ್ಲೆಲ್ಲ ಯಾವುದೋ ಅಡಿ ಟಿಪ್ಪಣಿ ಕೂಡ ಹಾಕಿದ್ದಾರೆ. ಆದರೆ, ಅಪರ್ಣಾ ಎಂದರೆ ಪಾರ್ವತಿ ಎಂದು ತಿಳಿಯಲು ಅಡಿ ಟಿಪ್ಪಣಿ ಬೇಕೇ? ಇಂಥ ಅಡಿ ಟಿಪ್ಪಣಿಗಳೂ ನೇರವಾಗಿ ಭಾರತೀಯ ಭಾಷೆಗಳು ತಿಳಿದಿಲ್ಲದವರದ್ದೇ ಇರಬಹುದೆಂದು ನನ್ನ ಗುಮಾನಿ.

ಇನ್ನೊಂದು ಕಡೆ ಪಂಚವಾದ್ಯಗಳ ಬಗ್ಗೆ ಬರೆಯುತ್ತ ಲೇಖಕರು ಹೀಗೆನ್ನುತ್ತಾರೆ — “ The pancha-maha-shabdas, the Five Great Instruments, the horn, conch, drum, victory bell and something called a ‘tammata’ (whose meaning is unclear)”.

ತಮ್ಮಟ (ತಮಟೆ) ಎಂದರೆ ಯಾರಿಗೆ ತಿಳಿದಿಲ್ಲ ಎನ್ನುವುದೇ ದೊಡ್ಡ ಪ್ರಶ್ನೆ!

-ಹಂಸಾನಂದಿ

( ಕೊಸರುಃ ಯಾವುದೇ ಪುಸ್ತಕವನ್ನು ಓದುವುದು ಆರೋಗ್ಯಕ್ಕೆ ಹಾನಿಕರ ಎಂದು, ಒಬ್ಬ ಪುಸ್ತಕ ಪ್ರೇಮಿಯಾದ ನಾನು ಹೇಳಲಾರೆ — ಆದರೆ ಓದಿದ ಮೇಲೆ ಸರಿ ತಪ್ಪುಗಳನ್ನು ವಿವೇಚಿಸುವಷ್ಟು ಮುಂಚಿನ ಸಿದ್ಧತೆ ಇಲ್ಲದಿದ್ದರೆ, ಈ ಪುಸ್ತಕ ಓದಿದರೆ ಆಗುವ ಅನುಕೂಲಕ್ಕಿಂತ, ಆಗಬಹುದಾದ ತಪ್ಪು ಕಲ್ಪನೆಗಳೇ ಹೆಚ್ಚು ಎಂಬುದು ನನ್ನ ಕಿವಿಮಾತು

ಕೊನೆಯ ಕೊಸರುಃ ನಾನು ಇಲ್ಲಿ ತೋರಿಸಿದ ಭಾಗಗಳು ಬಹುಪಾಲು ಪುಸ್ತಕದ ಮೊದಲ ಅರ್ಧದಲ್ಲೇ ಇರುವಂತಹವು. ಆದರೆ ಪುಸ್ತಕದ ಉಳಿದ ಭಾಗದಲ್ಲೂ ಇಂತಹ ಹಲವು ಉದಾಹರಣೆಗಳಿವೆ

ಕೊಟ್ಟ ಕೊನೆಯ ಕೊಸರುಃ ಇಂಗ್ಲಿಷ್ ಪುಸ್ತಕಕ್ಕೆ ಕನ್ನಡದಲ್ಲೇಕೆ ವಿಮರ್ಶೆ ಎಂದಿರಾ? ಇದು ಕರ್ನಾಟಕವನ್ನಾಳಿದ ರಾಜವಂಶಗಳ ಬಗ್ಗೆ ಇರುವುದರಿಂದ ಹಲವಾರು ಕನ್ನಡಿಗರು (ನನ್ನಂತೆಯೇ) ಈ ಪುಸ್ತಕ ಪ್ರಕಟವಾಗುವುದನ್ನು ಎದುರು ನೋಡುತ್ತಿದ್ದರು. ಅಂಥವರಿಗೆ ಅನುಕೂಲವಾಗಲಿ ಎಂದು ನನ್ನ ಉದ್ದೇಶ. ಈ ಪುಸ್ತಕದ ಹಲವಾರು ಅಣಿಮುತ್ತುಗಳನ್ನು ನನ್ನ ಟ್ವಿಟರ್ ಟೈಂ ಲೈನ್ ನಲ್ಲಿ#AKST @hamsanandi ಎಂದು ಹುಡುಕುವುದರ ಮೂಲಕ ನೋಡಬಹುದು)

--

--

Hamsanandi

ಕನ್ನಡಿಗ,Chomayiphile,Bibliophile,Astrophile,BMKphile, Musicphile,Tyagarajaphile,Agatha-phile, Blogophile,Twitterphile and now a Playwright /play director :-P