ಕರ್ನಾಟಕದಲ್ಲಿ ಸಂಗೀತ ಪರಂಪರೆ — ಒಂದು ಪಕ್ಷಿ ನೋಟ

Hamsanandi
7 min readJul 29, 2022

ಭಾರತೀಯ ಸಂಗೀತಕ್ಕೆ ಸಾವಿರಾರು ವರ್ಷಗಳ ಇತಿಹಾಸವಿರುವುದೂ, ಇಂದಿನ ನೆಲೆಯಲ್ಲಿ ಇದರಲ್ಲಿ ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತ ಎಂದು ಎರಡು ಪ್ರಮುಖ ಕವಲುಗಳಿರುವುದೂ ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ವಿಚಾರ. ಇಂದಿನ ಕರ್ನಾಟಕ ರಾಜ್ಯದ ಭಾಗಗಳಲ್ಲಿ ಸಂಗೀತವು ಹರಿದು ಬಂದಿರುವ ಪರಂಪರೆಯನ್ನು ತೋರಬೇಕೆನ್ನುವುದೇ ಈ ಬರಹದ ಉದ್ದೇಶ. ಸಾಮಾನ್ಯರಿರಲಿ, ಎಷ್ಟೋ ಜನ ಕಲಾವಿದರಿಗೇ ಸಂಗೀತದ ಬಗ್ಗೆ, ಅದರ ಪರಂಪರೆಯ ಬಗ್ಗೆ ಪೂರ್ತಿ ವಿವರಗಳು ತಿಳಿದಿರುವುದಿಲ್ಲ ಎನ್ನುವುದು ದುರದೃಷ್ಟಕರ. ವಿಷಯದ ಹರಹು ಹಿರಿದಾದದ್ದರಿಂದ ಪ್ರತಿಯೊಂದು ವೈಶಿಷ್ಟ್ಯವನ್ನೂ ಇಲ್ಲಿ ವಿವರಿಸಲು ಸಾಧ್ಯವಾಗದಿದ್ದರೂ ಕೂಡ, ತುಸು ಬೆಳಕು ಚೆಲ್ಲುವ ಪ್ರಯತ್ನವಷ್ಟೇ ಇದು.

ಭಾರತೀಯ ಸಂಗೀತದ ಆರಂಭವನ್ನು ಸಾಮವೇದದೊಂದಿಗೇ ಹೇಳುತ್ತೇವೆ. ಸುಮಾರಾಗಿ ಎರಡು ಸಾವಿರ ವರ್ಷಗಳ ಹಿಂದೆ ಬರೆಯಲಾಗಿರುವ ಭರತನ ನಾಟ್ಯಶಾಸ್ತ್ರವು ಬ್ರಹ್ಮನು ನಾಟ್ಯವೆಂಬ ವೇದವನ್ನು ನಾಲ್ಕೂ ವೇದಗಳಿಂದ ಒಂದೊಂದು ಅಂಶವನ್ನು ತೆಗೆದುಕೊಂಡು ಜನರ ಮನರಂಜನೆಗಾಗಿ ರಚಿಸಿದನೆಂದು ಹೇಳುತ್ತಾನೆ. ಇದರ ಒಳಗುಟ್ಟೇನೆಂದರೆ ಪ್ರದರ್ಶನ ಕಲೆಗಳೆಲ್ಲ ಸಾಮಾನ್ಯ ಜನರಿಗೆ ಬೇಕಾದುವು, ಮತ್ತು ವೇದಗಳಂತೆಯೇ ಸಂಗೀತ ನರ್ತನ ಅಭಿನಯ ಮೊದಲಾದ ಕಲೆಗಳೂ ಅನಾದಿ ಎಂದು ನಮ್ಮ ಪರಂಪರೆಯ ಅಭಿಪ್ರಾಯ ಎನ್ನುವುದು.

ಭರತನೇ ತಾನು ಬರೆಯುವ ವಿಷಯಗಳು ದೇಶ ಕಾಲಕ್ಕೆ ತಕ್ಕಂತೆ ಬದಲಾಗುವುದು ಎಂದೂ ಹೇಳುತ್ತಾನೆ. ಹಾಗೇ ಸಂಗೀತವು ದೇಶ ಕಾಲದಲ್ಲಿ ಬದಲಾಗುವುದೂ, ಬೆಳವಣಿಗೆ ಆಗುವುದೂ ನಡೆದುಕೊಂಡು ಬಂದಿರುವ ಸಂಗತಿ. ಒಂದು ಸರಳವಾದ ಉದಾಹರಣೆ ಎಂದರೆ ಒಂದು ಕಾಲದಲ್ಲಿ ಗೀತ, ವಾದ್ಯ ಮತ್ತು ನರ್ತನ ಎಲ್ಲವೂ ಸೇರಿ ಸಂಗೀತವಾಗುತ್ತದೆ ಎಂದು ಪರಿಗಣಿಸುತ್ತಿದ್ದರೆ, ಇಂದು ನಾವು ಗೀತ , ವಾದ್ಯಗಳನ್ನಷ್ಟೇ ಸಂಗೀತವೆಂದು ಕರೆದು ನರ್ತನವನ್ನೇ ಬೇರೆ ಇಟ್ಟು ನೋಡುತ್ತೇವಲ್ಲ! ನಮ್ಮ ಶಾಸ್ತ್ರಗಳು ಯಾವ ರೀತಿ ಪರಂಪರೆಯನ್ನು ಪಾಲಿಸುವುದನ್ನು ಗೌರವಿಸುತ್ತದೆಯೋ, ಅದೇ ರೀತಿ ಹೊಸ ಅವಿಷ್ಕಾರಗಳನ್ನೂ ಪ್ರೋತ್ಸಾಹಿಸುತ್ತದೆ. ಅವು ಕಾಲದ ಪರೀಕ್ಷೆ, ಹಾಗೂ ಜನ ಮನ್ನಣೆ ಎರಡನ್ನೂ ಗೆದ್ದಾಗ, ಈ ಅವಿಷ್ಕಾರಗಳನ್ನೂ ಪರಂಪರೆಯ ಭಾಗವನ್ನಾಗಿ ಮಾಡುತ್ತವೆ. ಸಂಗೀತದ ವಿಷಯದಲ್ಲಿ ಕೂಡಾ ಇದು ನಡೆದಿದೆ.

ನಮ್ಮ ಸಂಸ್ಕೃತಿಯ ವಿಶೇಷವೆಂದರೆ ಯಾವುದೇ ಕಲೆಯೇ ಆಗಲಿ, ಶಾಸ್ತ್ರವೇ ಆಗಲಿ, ತಾನೇ ಎಲ್ಲದರಿಂದ ಬೇರೆಯಾಗಿ ನಿಲ್ಲುವಂಥದ್ದಲ್ಲ. ಸಾಹಿತ್ಯ ಅಥವಾ ಗಣಿತ ಗ್ರಂಥಗಳಲ್ಲಿ ಸಂಗೀತದ ಅಂಶಗಳು, ಸಂಗೀತ ಗ್ರಂಥಗಳಲ್ಲಿ ಗಣಿತ ಅಥವಾ ಸಾಹಿತ್ಯ ಅಂಶಗಳು, ಇವೆರಡರಲ್ಲಿಯೂ ಪುರಾಣ-ಇತಿಹಾಸಗಳ ಅಂಶಗಳು, ಹೀಗೆ ಎಲ್ಲದರಲ್ಲಿಯೂ ಎಲ್ಲವನ್ನೂ ಕಾಣುವ ವಿಶಾಲ ದೃಷ್ಟಿಯೇ ನಮ್ಮ ದೇಶದ ಸಂಸ್ಕೃತಿಯ ಹೆಗ್ಗುರುತು. ಪದ್ಯ ಸಾಹಿತ್ಯಕ್ಕೆ ಬೆನ್ನೆಲುಬಾದ ಛಂದಸ್ಸಿನ ಮುಖ್ಯ ಅಂಶಗಳನ್ನು ಭರತನ ನಾಟ್ಯಶಾಸ್ತ್ರದಲ್ಲೇ ನಾವು ಕಾಣುತ್ತೇವೆ. ನಮ್ಮ ಸಾಹಿತ್ಯದಲ್ಲಿ ನೂರಾರು ಬಗೆಯ ಛಂದಸ್ಸಿನ ಬೆಳವಣಿಗೆ ಆಗುವುದಕ್ಕೆ, ಅವು ನೆನಪಿನಲ್ಲಿ ಇಟ್ಟುಕೊಳ್ಳುವುದಕ್ಕೂ, ಹಾಡುವುದಕ್ಕೂ ಅನುವಾಗುತ್ತದೆ ಎಂಬುದೂ ಒಂದು ಕಾರಣ. ಹಾಗಿದ್ದರೆ, ಸಂಗೀತ ಚಿಕ್ಕ ದೊಡ್ಡ ಅಂಶಗಳನ್ನು ನಾವು ಕನ್ನಡ ಸಾಹಿತ್ಯದಲ್ಲಿ ಮತ್ತು ಕನ್ನಡ ನಾಡಿನ ಶಾಸನಗಳಲ್ಲಿ ಕಾಣುವುದು ಯಾವ ಆಶ್ಚರ್ಯವೂ ಇಲ್ಲ.

ಕರ್ನಾಟಕದಲ್ಲಿ ಸಂಗೀತಕ್ಕೆ ಬಹಳ ಹಿಂದಿನಿಂದಲೇ ಮನ್ನಣೆ ಇತ್ತೆಂಬುದಕ್ಕೆ ಸಾಕ್ಷಿಯಾಗಿ ಸಾ.ಶ.೪೫೦ ರ ತಾಳಗುಂದದ ಸಂಸ್ಕೃತ ಶಾಸನವೊಂದರಲ್ಲಿ ಆ ಊರಿನಲ್ಲಿ ಮನೆ ಮನೆಯಲ್ಲೂ ಸಂಗೀತ ಹೊಮ್ಮುತ್ತಿತ್ತೆಂಬ (ಸಂಗೀತವಲ್ಗುನಿನದೇಷು ಗೃಹೇಷು) ಮಾತು ಬಂದಿರುವುದನ್ನು ಗಮನಿಸಬೇಕು. ಹೀಗೆಯೇ ನಮ್ಮನ್ನು ಆಳಿದ ಅರಸ-ಅರಸಿಯರೇ ಹಲವರು ಸಂಗೀತಕಲೆಯಲ್ಲಿ ನಿಷ್ಣಾತರಾಗಿದ್ದರೆಂಬುದನ್ನೂ, ಅಲ್ಲದೆ ಅವರ ಆಸ್ಥಾನಗಳಲ್ಲಿ ಇದ್ದಂಥ ಸಂಗೀತಗಾರರ ಹೆಸರುಗಳನ್ನೂ ನಾವು ಶಾಸನಗಳಿಂದಲೂ, ಆಯಾ ಕಾಲದ ಸಾಹಿತ್ಯ ಕೃತಿಗಳಿಂದಲೂ ತಿಳಿಯುತ್ತೇವೆ.

ಹಳಗನ್ನಡದ ಕಾಲದಲ್ಲಿ, ಪಂಪ ರನ್ನ ಪೊನ್ನ ಮೊದಲಾದವರ ಬರವಣಿಗೆಯಲ್ಲಿ, ತಕ್ಕ ಸಂದರ್ಭಗಳಲ್ಲಿ ಸಂಗೀತದ ಪಾರಿಭಾಷಿಕ ಪದಗಳನ್ನು, ಅಥವಾ ಸಂಗೀತದ ಬಗ್ಗೆ ಗಮನಾರ್ಹ ಅಂಶಗಳನ್ನಾಗಲಿ ಕಾಣಬಹುದು.ಇಂದು ನಡೆಯುವಂತೆ ಸಂಗೀತ, ಅಥವಾ ನರ್ತನ ಕಚೇರಿಗಳು ಅಂದೂ ನಡೆಯುತ್ತಿದ್ದವು! ಅವುಗಳನ್ನು ‘ಕೇಳಿಕೆ ಎಂದು ಕರೆಯಲಾಗುತ್ತಿತ್ತು ಎನ್ನುವುದು ಸಾಹಿತ್ಯಾಧಾರದಿಂದ ನಮಗೆ ತಿಳಿದುಬರುತ್ತವೆ. ಕೇಲಿ, ಕೇಳಿ ಎಂದರೆ ಆಟ ಎಂದು ಅರ್ಥ. ಈಗಲೂ ಸಂಗೀತವು ಒಂದು ಪ್ರಮುಖ ಅಂಶವಾಗಿರುವ ಬಯಲಾಟದ ದೊಡ್ಡಾಟ, ಸಣ್ಣಾಟ ಮೊದಲಾದ ಹೆಸರುಗಳು ಇರುವುದನ್ನು ನಾವು ಗಮನಿಸಬಹುದು. ಅಂತೆಯೇ ಜಡೆ ಕೋಲಾಟದಂತಹ ಕಲೆಯನ್ನೂ ಪೊನ್ನ ಒಂದು ಕಡೆ ಪ್ರಸ್ತಾಪಿಸುತ್ತಾನೆ. ಪಂಪನು ಸೊಗಸಾದ ಸಂಗೀತವನ್ನು ಕೇಳಿದಾಗ ತನ್ನ ಮನಸ್ಸು ಬನವಾಸಿಗೆ ಹೋದಂತೆ ಭಾಸವಾಗುತ್ತೆಂದು ( ಇಂಪನಾಳ್ದ ಗೇಯಂ ಕಿವಿವೊಕ್ಕಡಂ, ನೆನೆವುದೆನ್ನ ಮನಂ ಬನವಾಸಿ ದೇಸಮಂ) ಎಂದು ನುಡಿಯುತ್ತಾನೆ. ಅಷ್ಟೇಕೆ, ಸಂಗೀತದ ಗೋಷ್ಟಿಗಳಿಗೆ ಆಕರವಾದಂತಹ ಮನುಷ್ಯರೇ ನಿಜವಾದ ಮನುಷ್ಯರು (ಗೇಯದ ಗೊಟ್ಟಿಯಲಂಪಿನಿಂಪುಗಳ್ಗಾಗರಮಾದ ಮಾನಿಸರೆ ಮಾನಿಸರ್) ಎನ್ನುತ್ತಾನೆ. “ ಸಾಹಿತ್ಯ ಸಂಗೀತ ಕಲಾ ವಿಹೀನಃ ಸಾಕ್ಷಾತ್ ಪಶುಃ ಪುಚ್ಛವಿಷಾಣಹೀನಃ” ಎಂಬ ಸಂಸ್ಕೃತ ಸುಭಾಷಿತದ ಸಾರವೇ ಪಂಪನ ಈ ಸಾಲು ಎಂಬಂತಿದೆ! ನಮ್ಮ ಬಾಳಿನಲ್ಲಿ ಸಂಗೀತಕ್ಕೆ ಕೊಟ್ಟಿರುವ ಸ್ಥಾನ ಹೀಗಿರುವುದರಿಂದ, ಇಂತಹ ಮಾತುಗಳಲ್ಲಿ ಅಚ್ಚರಿ ಇಲ್ಲ. ನಂತರದ ಕವಿಗಳೂ, ಉದಾಹರಣೆಗೆ ಭರತೇಶ ವೈಭವದಲ್ಲಿ ರತ್ನಾಕರವರ್ಣಿಯೂ, ಕುಮಾರವ್ಯಾಸ ಕುಮಾರವಾಲ್ಮೀಕಿಯರು ಅವರ ಭಾರತ ರಾಮಾಯಣಗಳಲ್ಲಿಯೂ ಸಂದರ್ಭೋಚಿತವಾಗಿ ಬಣ್ಣಿಸಿದ್ದಾರೆ. ಗೋವಿಂದ ವೈದ್ಯ ಕವಿಯ ಕಂಠೀರವನರಸರಾಜವಿಜಯ ಕಾವ್ಯದಲ್ಲಂತೂ ಶ್ರೀರಂಗಪಟ್ಟಣದಲ್ಲಿನ ಕಲಾವಿದರ ಕೇರಿಗಳ ವರ್ಣನೆಯೇ ಇದೆ.

ಭರತನ ನಾಟ್ಯಶಾಸ್ತ್ರದ ಕಾಲದಲ್ಲೇ ಸಂಗೀತವು ಬಹಳ ಉನ್ನತ ಸ್ಥಿತಿಗೆ ಮುಟ್ಟಿತ್ತೆಂಬುದನ್ನು ನಾವು ಅಲ್ಲಿನ ವಿವರಗಳಿಂದ ತಿಳಿಯಬಹುದು. ಆ ಸಂಗೀತದ ವಿವರಗಳು ಇಂದಿನ ನೆಲೆಯಲ್ಲಿ ಪೂರ್ತಿ ನಮಗೆ ತಿಳಿಯದೇ ಹೋದರೂ ಸಂಗೀತದ ಸ್ವರ,ಶ್ರುತಿ,ವಾದ್ಯಗಳು ಮೊದಲಾಗಿ ಹಲವು ಅಂಶಗಳು, ರಸಗಳ ಕಲ್ಪನೆ ಮೊದಲಾದುವು ಇಂದಿಗೂ ಸಲ್ಲುವಂತಹ ವಿಷಯಗಳೇ. ಅಂದು ಬಳಕೆಯಲ್ಲಿದ್ದ ಷಡ್ಜ ಗ್ರಾಮ, ಮಧ್ಯಮ ಗ್ರಾಮಗಳೆಂಬ ಪ್ರಕಾರಗಳು ಇಂದು ಬದಲಾಗಿವೆ. ಈ ಬದಲಾವಣೆಗಳು ಮುಂದೆ ಕಾಲಕಾಲಕ್ಕೆ ಹೇಗೆ ಹರಿದಿವೆ ಎಂಬುದನ್ನು ನಾವು ನಂತರದ ಪುಸ್ತಕಗಳಿಂದ ತಿಳಿಯುತ್ತೇವೆ. ಇಂತಹ ಗ್ರಂಥಗಳಲ್ಲಿ ಹಲವು ಮುಖ್ಯವಾದುವು, ಇಂದಿನ ಕರ್ನಾಟಕದ ಭಾಗದಲ್ಲೇ ಬರೆಯಲ್ಪಟ್ಟವೆನ್ನುವುದು ಗಮನಾರ್ಹ.

ಈ ಪುಸ್ತಕಗಳ ಸಾಲಿನಲ್ಲಿ ಮೊದಲು ನೋಡುವಂಥದ್ದು ಇಂದಿನ ಹಂಪೆಯ ಪ್ರದೇಶದಲ್ಲಿ, ಸುಮಾರು ೭ನೆಯ ಶತಮಾನದಲ್ಲಿ ಬರೆಯಲ್ಪಟ್ಟ ಮತಂಗ ಮುನಿಯ ಬೃಹದ್ದೇಶೀ ಎಂಬ ಗ್ರಂಥ. ಭರತನ ನಾಟ್ಯಶಾಸ್ತ್ರದಿಂದಲೇ ಪ್ರೇರಿತವಾಗಿರುವ ಈ ಗ್ರಂಥದೆ ಹೆಸರಿನೊಳಗೇ ದೇಶೀ ಎಂಬ ಉಲ್ಲೇಖವಿರುವುದೇ ಮಾರ್ಗ ಸಂಗೀತಕ್ಕೂ (ಎಂದರೆ ಶಾಸ್ತ್ರೀಯ), ದೇಶೀ ಸಂಗೀತಕ್ಕೂ ( ಎಂದರೆ ಜನಪದ ಸಂಗೀತ ಎನ್ನಬಹುದು) ಇರುವ ಹತ್ತಿರದ ಸಂಬಂಧದ ಪ್ರಾಮುಖ್ಯತೆಯನ್ನು ಗಮನಿಸಿದ್ದನ್ನು ಸೂಚಿಸುತ್ತದೆ.ದೇಶೀ ಸಂಗೀತದಲ್ಲೂ ಮಾರ್ಗದಂತೆಯೇ ರಾಗಗಳ, ತಾಳಗಳ ಪ್ರಸ್ತಕ್ತಿ ಇರುವುದನ್ನು ನೋಡಿದಾಗ, ಮಾರ್ಗ ಸಂಗೀತವು ಪ್ರಾದೇಶಿಕವಾಗಿ ಭಿನ್ನವಾಗಿ ಬದಲಾವಣೆ ಹೊಂದಿದಾಗ, ಆ ಘಟ್ಟಗಳೆಲ್ಲ ದೇಶೀಸಂಗೀತವಾಗುತ್ತವೆ ಎಂದೂ ಹೇಳಬಹುದು. ಇಂದಿಗೂ ರಾಗಗಳಲ್ಲಿ ಕೆಲವನ್ನು ದೇಶ್ಯ ರಾಗಗಳು ಎಂದು ಕರೆಯುವ ಪದ್ಧತಿಗೆ ಇದೇ ಕಾರಣವೆಂದು ತೋರುತ್ತದೆ.

ಈಗ ಭಾರತೀಯ ಸಂಗೀತದ ಅತೀ ಪ್ರಮುಖ ಕಲ್ಪನೆಯಾದ “ರಾಗ”ದ ವಿವರಣೆಯನ್ನು ಮೊತ್ತಮೊದಲಿಗೆ ನೋಡುವುದೂ, ಸಂಗೀತವನ್ನು ಬರವಣಿಗೆಗೆ ಅಳವಡಿಸುವ ಸೌಲಭ್ಯ ಕಲ್ಪಿಸುವ ಸ್ವರಲಿಪಿಯ ಉದಾಹರಣೆಗಳು ಸಿಗುವುದೂ ಈ ಬೃಹದ್ದೇಶಿಯಲ್ಲಿಯೇ. ದಕ್ಷಿಣ ಭಾರತದಲ್ಲಿ ಪ್ರಚಲಿತವಾಗಿರುವ ಸಂಗೀತಕ್ಕೆ ಕರ್ನಾಟಕ ಸಂಗೀತವೆಂದು ಹೆಸರು ತುಂಬಾ ಪುರಾತನ ಕಾಲದಿಂದ ಅಲ್ಲದಿದ್ದರೂ, ಪ್ರಚಲಿತಕ್ಕೆ ಬಂದು ನಿಂತಿರುವುದಕ್ಕೆ, ಮತಂಗನಿಂದ ಮೊದಲಾಗಿ ಸುಮಾರು ೧೮ನೇ ಶತಮಾನದವರೆಗೂ ಕರ್ನಾಟಕದ ಭೂಭಾಗದಿಂದ ಬಂದಿರುವ ಗ್ರಂಥಪರಂಪರೆಯೂ ಒಂದು ಪ್ರಮುಖ ಕಾರಣ ಎಂದು ವಿದ್ವಾಂಸರು ಒಪ್ಪಿದ್ದಾರೆ. ಇದರ ಬಗ್ಗೆ ನಾನೂ ಬೇರೆ ಒಂದು ಬರಹದಲ್ಲೇ ವಿವರವಾಗಿ ಬರೆದಿರುವುದರಿಂದ ಇಲ್ಲಿ ವಿಸ್ತರಿಸಲು ಹೋಗುತ್ತಿಲ್ಲ.

ಬೃಹದ್ದೇಶಿಯ ನಂತರ ಕರ್ನಾಟಕದಿಂದ ಬಂದ ಗ್ರಂಥಗಳಲ್ಲಿ ಮೊದಲಿಗೆ ನಾವು ನೆನೆಯಬೇಕಾದ್ದು ಕಲ್ಯಾಣಿ ಚಾಲುಕ್ಯರ ಅರಸನಾದ ಮೂರನೇ ಸೋಮೇಶ್ವರ ಬರೆದಿರುವ ಮಾನಸೋಲ್ಲಾಸವನ್ನು. ವಿಶ್ವಕೋಶದ ಮಾದರಿಯ ಈ ಸಂಸ್ಕೃತ ಗ್ರಂಥದಲ್ಲಿ ಗೀತವಿನೋದ, ವಾದ್ಯವಿನೋದ ಮತ್ತು ನರ್ತನ ವಿನೋದಗಳೆಂಬ ಅಧ್ಯಾಯಗಳಿವೆ. ಸುಮಾರು ಒಂಬೈನೂರು ವರ್ಷಗಳ ಹಿಂದಿನ ಈ ಪುಸ್ತಕದಲ್ಲಿ ಇಂದಿಗೂ ಪ್ರಸ್ತುತವಾದ ಬಹಳಷ್ಟು ಸಂಗೀತ ಮತ್ತು ಸಂಗೀತಕ್ಕೆ ಬೇಕಾದ ಸಾಹಿತ್ಯದ ವಿಚಾರಗಳ ಚರ್ಚೆಯಾಗಿದೆ. ಈತನ ಮಗನಾದ ಜಗದೇಕಮಲ್ಲನು ಸಂಗೀತ ಚೂಡಾಮಣಿ ಎಂಬ ಇನ್ನೊಂದು ಗ್ರಂಥವನ್ನು ಬರೆದಿದ್ದಾನೆ. ಇದರ ನಂತರ ದೇವಗಿರಿಯಲ್ಲಿ ಶಾರ್ಙ್ಗದೇವನು ಬರೆದ ಸಂಗೀತ ರತ್ನಾಕರವನ್ನು ನಾವು ಇಂದಿನ ಸಂಗೀತಕ್ಕೆ ಹಾದಿತೋರುವ ಗ್ರಂಥವೆಂದೇ ಪರಿಗಣಿಸುತ್ತೇವೆ. ಆ ಕಾಲದಲ್ಲಿ ದೇವಗಿರಿಯೂ ಕರ್ನಾಟಕ ಪ್ರದೇಶದ ಭಾಗವೆಂದೇ ಲೆಕ್ಕಿಸಲ್ಪಡುತ್ತಿದ್ದದೂ, ಅಲ್ಲಿಯ ಅರಸರೂ ಕನ್ನಡಿಗರಾದದ್ದೂ, ಗ್ರಂಥಕರ್ತೃವಿನ ಕುಟುಂಬವು ಮೊದಲು ಕಾಶ್ಮೀರದವರಾಗಿದ್ದರೂ ಸುಮಾರು ಎರಡು ತಲೆಮಾರುಗಳ ಕಾಲ ದೇವಗಿರಿಯಲ್ಲಿ ಇದ್ದ ಕಾರಣದಿಂದ, ಶಾರ್ಙ್ಗದೇವ ಕರ್ನಾಟಕದವನೇ ಎನ್ನಬೇಕು.ಇವನ ಕಾಲದ ನಂತರ, ಅಂದರೆ ಹದಿನಾಲ್ಕನೆಯ ಶತಮಾನದ ವೇಳೆಗೆ ಭಾರತೀಯ ಸಂಗೀತದಲ್ಲಿ ಎರಡು ಪ್ರಮುಖ ಕವಲುಗಳಾಗಲು ಹೊರಟಿದ್ದದು. ಪರದೇಶದವರ ಆಕ್ರಮಣಗಳಿಗೆ ಒಳಗಾದ ಉತ್ತರ ಭಾರತದಲ್ಲಿ ಸಂಗೀತ ಹೊರಗಿನಿಂದ ಬಂದ ಅಂಶಗಳನ್ನು ತುಸು ಅರಗಿಸಿಕೊಳ್ಳತೊಡಗಿತು, ರೂಢಿಸಿಕೊಳ್ಳತೊಡಗಿತು. ಅಷ್ಟೇ ಅಲ್ಲ, ಆಳ್ವಿಕೆಯಲ್ಲಿ ಇದ್ದವರಿಗೆ ಮೆಚ್ಚುಗೆಯಾಗಬಲ್ಲಂತಹ ಸಾಹಿತ್ಯವನ್ನು ಹೊಂದುವ ಸಂಗೀತ ರಚನೆಗಳು ಕೂಡ ಹೊಸತಾಗಿ ಬಳಕೆಗೆ ಬಂದವು. ಅದೇ ದಕ್ಷಿಣ ಭಾಗದಲ್ಲಿ, ಹಿಂದಿನಿಂದ ಬಂದ ಸಾಂಪ್ರದಾಯಿಕ ಅಂಶಗಳು ಹೆಚ್ಚಾಗಿ ಉಳಿದುಕೊಂಡವು. ಆದರೆ, ಎರಡು ಕವಲಾಗಿದ್ದರೂ, ಇಂದಿನ ಕೇಳುಗರ ಅನುಭವಗಳಲ್ಲಿ ತುಸು ಬೇರೆ ಎನ್ನಿಸಿದರೂ ಕೂಡ, ಉತ್ತರ ಭಾರತದ ಮತ್ತು ದಕ್ಷಿಣ ಭಾರತೀಯ ಶಾಸ್ತ್ರೀಯ ಸಂಗೀತಗಳ ನೆಲೆಗಟ್ಟು ಒಂದೇ ಎನ್ನುವುದನ್ನು ಮಾತ್ರ ಮರೆಯುವಂತಿಲ್ಲ.

ಶಾರ್ಙ್ಗದೇವನ ನಂತರ ವಿಜಯನಗರದ ಅರಸು ಇಮ್ಮಡಿ ದೇವರಾಯನ ಕಾಲದಲ್ಲಿ, ಸಂಗೀತ ರತ್ನಾಕರಕ್ಕೆ ಕಲಾನಿಧಿ ಎಂಬ ವ್ಯಾಖ್ಯಾನ ಬರೆದಾತ ಕಲ್ಲಿನಾಥ. ಇವನು ಆ ಮೊದಲಿನ ಗ್ರಂಥಗಳಲ್ಲಿದ್ದ ಲಕ್ಷ್ಯ (ಎಂದರೆ ವಾಡಿಕೆಯಲ್ಲಿ ಇರುವಂತಹ ಸಂಗೀತ) ಮತ್ತು ಲಕ್ಷಣ ( ಅಂದರೆ ಪುಸ್ತಕಗಳಲ್ಲಿ ವಿವರಿಸಲ್ಪಡುವ ಸಂಗೀತ) ಗಳ ನಡುವೆ ಇದ್ದ ವ್ಯತ್ಯಾಸಗಳನ್ನು ನಿವಾರಿಸಲು ಪ್ರಯತ್ನ ಪಟ್ಟುದಲ್ಲದೆ, ಇಂದು ಅಭ್ಯಾಸದಲ್ಲಿರುವ ಕರ್ನಾಟಕ ಸಂಗೀತಕ್ಕೆ ಬುನಾದಿ ಹಾಕಿದ ಮಹಾನುಭಾವರಲ್ಲೊಬ್ಬ. ಈತನಿಗಿಂತ ಕೆಲ ತಲೆಮಾರುಗಳ ಮೊದಲು, ಕರ್ನಾಟ ಸಿಂಹಾಸನ ಸ್ಥಾಪನಾಚಾರ್ಯರೆಂದೇ ಪ್ರಸಿದ್ಧರಾದ ಶ್ರೀವಿದ್ಯಾರಣ್ಯ ಮುನಿಗಳು ಸಂಗೀತಸಾರವೆಂಬ ಗ್ರಂಥವನ್ನು ರಚಿಸಿರುವುದೂ,ಅದರಲ್ಲಿ ಇಂದಿನ ರಾಗಗಳ ವರ್ಗೀಕರಣ ವ್ಯವಸ್ಥೆಯಾದ ಮೇಳ-ಜನ್ಯಗಳೆಂಬ ಪದ್ಧತಿಯನ್ನು ಮೊತ್ತ ಮೊದಲಾಗಿ ಹೇಳಿರುವುದೂ ತಿಳಿದು ಬಂದಿದೆಯಾದರೂ, ಅವರ ಗ್ರಂಥ ನಮಗಿನ್ನೂ ದೊರೆತಿಲ್ಲ. ಅದರ ತುಣುಕುಗಳನ್ನು, ಅವರ ಶಿಷ್ಯಪರಂಪರೆಗೆ ಸೇರಿದಂತಹ, ತಂಜಾವೂರಿನ ಚೆವ್ವಪ್ಪನಾಯಕಾದಿಗಳ ಅಮಾತ್ಯರಾಗಿದ್ದ ಗೋವಿಂದ ದೀಕ್ಷಿತರು ಬರೆದಿರುವ ಸಂಗೀತಸುಧಾ ಎಂಬ ಗ್ರಂಥದಲ್ಲಿ ಕಾಣುತ್ತೇವೆ.

ಇದೇ ಮುಂದೆ ಕರ್ನಾಟಕದ ಲಾಕ್ಷಣಿಕರ ಪರಂಪರೆಯಲ್ಲಿ ೧೬ನೆಯ ಶತಮಾನದಲ್ಲಿ ಅಳಿಯ ರಾಮರಾಯನ ಮಂತ್ರಿ ರಾಮಾಮಾತ್ಯ (ರಾಮಪ್ಪಯ್ಯ, ಈತ ಈ ಮೊದಲೇ ಹೇಳಿರುವ ಕಲ್ಲಿನಾಥನ ಮೊಮ್ಮೊಗ ಕೂಡ), ೧೭ನೆಯ ಶತಮಾನದಲ್ಲಿ ಗೋವಿಂದ ದೀಕ್ಷಿತ, ಮತ್ತು ಆತನ ಮಗ ವೇಂಕಟಮಖಿ (ಇವರು ವಿಜಯನಗರದಿಂದ, ತಂಜಾವೂರಿನ ನಾಯಕ ದೊರೆಗಳ ಆಸ್ಥಾನಕ್ಕೆ ಹೋಗಿ ಮಂತ್ರಿಗಳಾಗಿದ್ದವರು), ಮತ್ತೆ ಅದೇ ಕುಟುಂಬಕ್ಕೆ ಸೇರಿದ ಮುದ್ದುವೇಂಕಟಮಖಿ ಇವರು ಪ್ರಮುಖರು. ಇಂದು ನಾವು ಯಾವುದನ್ನು ಕರ್ನಾಟಕಸಂಗೀತವೆಂದು ಹಾಡುತ್ತೇವೋ ಅದರ ಮೂಲ ತಳಹದಿಯಾಗಿನಾವು ಈ ನಾಲ್ವರ ಗ್ರಂಥ (ಸ್ವರಮೇಳಕಲಾನಿಧಿ, ಸಂಗೀತ ಸುಧಾನಿಧಿ, ಚತುರ್ದಂಡಿ ಪ್ರಕಾಶಿಕೆ, ರಾಗಲಕ್ಷಣ) ಗಳನ್ನು ಪರಿಗಣಿಸಲೇಬೇಕಾಗುತ್ತವೆ. ಕರ್ನಾಟಕದವನೇ ಆದ, ನಂತರ ಉತ್ತರದ ರಾಜರ ಆಸ್ಥಾನಗಳಲ್ಲಿದ್ದ ಪಂಡರೀಕ ವಿಠಲನು ರಾಗಚಂದ್ರೋದಯ, ರಾಗಮಾಲಾ ಮತ್ತು ರಾಗಮಂಜರೀ ಎಂಬ ಗ್ರಂಥಗಳನ್ನು ಬರೆದು, ಆ ಮೊದಲೇ ನಮ್ಮ ಶಾಸ್ತ್ರೀಯ ಸಂಗೀತದಲ್ಲಿ ಮೂಡಿದ್ದ ಎರಡು ಕವಲುಗಳು ೧೬ ನೇ ಶತಮಾನದ ವೇಳೆಗೆ ನೆಲೆಗೊಳ್ಳತೊಡಗಿದ್ದವು ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಆ ಕವಲುಗಳನ್ನೇ ನಾವೀಗ ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತ ಎಂದು ಕರೆಯುತ್ತೇವೆ.

ಸಂಗೀತ ಸಂಬಂಧಿ ವಿಷಯಗಳನ್ನು ವಿವರಿಸುವ ,ಕರ್ನಾಟಕದಲ್ಲಿ ರಚನೆಗೊಂಡ ಇತರ ಗಮನಾರ್ಹ ಪುಸ್ತಕಗಳ ಸಾಲಿನಲ್ಲಿ ನಿಜಗುಣಶಿವಯೋಗಿಗಳ ವಿವೇಕ ಚಿಂತಾಮಣಿ, ಮುಮ್ಮಡಿ ಕೃಷ್ಣರಾಜ ಒಡೆಯರ ಶ್ರೀತತ್ತ್ವನಿಧಿಗಳನ್ನು ಸೇರಿಸಬಹುದು. ಇವೆರಡೂ ವಿಶ್ವಕೋಶಗಳ ರೀತಿಯ ಪುಸ್ತಕಗಳು, ಹಾಗಾಗಿ ಸಂಗೀತದ ಜೊತೆಗೆ ಬೇರೆ ವಿಷಯಗಳನ್ನೂ ಇವು ವಿವರಿಸುತ್ತವೆ. ಇನ್ನು ಪೂರ್ಣವಾಗಿ ಸಂಗೀತವನ್ನೇ ವರ್ಣಿಸುವ ೧೭ನೇ ಶತಮಾನದ ಅಭಿನವ ಭರತಸಾರ ಸಂಗ್ರಹ ಎಂಬ ಸಂಸ್ಕೃತ ಭಾಷೆಯಲ್ಲಿರುವ ಗ್ರಂಥವನ್ನೂ ನೆನೆಯಬಹುದು. ಇದನ್ನು ಬರೆದದ್ದು ಮಧುಗಿರಿಯ ರಾಜನಾಗಿದ್ದ ಸಪ್ಪೇಗೌಡ (ಈ ಅರಸನಿಗೆ ಮುಮ್ಮಡಿ ಚಿಕ್ಕಭೂಪಾಲನೆಂದೂ ಹೆಸರಿದೆ).

ಶಾಸ್ತ್ರೀಯ ಸುವರ್ಣ ಸೌರಭ

ಇನ್ನು ಪ್ರಸಕ್ತಕಾಲಕ್ಕೆ ಬಂದರೆ, ಸಂಗೀತ ಶಾಸ್ತ್ರಗ್ರಂಥಗಳನ್ನು ಹೊರತಂದು, ಹಳೆಯಗ್ರಂಥಗಳನ್ನು ಸಂಪಾದಿಸಿ, ವ್ಯಾಖ್ಯಾನಿಸಿರುವ ಮಹಾಮಹೋಪಾಧ್ಯಾಯ ಪದ್ಮಶ್ರ‍ೀ ಡಾ. ರಾ.ಸತ್ಯನಾರಾಯಣ ಅವರ ಕೊಡುಗೆಯನ್ನು ಭಾರತೀಯ ಸಂಗೀತಗಾರರು ಮರೆಯುವಂತೆಯೇ ಇಲ್ಲ. ಡಾ. ಶ್ರೀಕಾಂತಮ್ ನಾಗೇಂದ್ರಶಾಸ್ತ್ರಿಗಳೂ ಮಹಾಮಹೋಪಾಧ್ಯಾಯರ ಶಿಷ್ಯರಾಗಿದ್ದು, ಅವರ ಐವತ್ತನೆಯ ಹುಟ್ಟುಹಬ್ಬದ ಸಂಭ್ರಮದಲ್ಲಿ , ಈ ಶಾಸ್ತ್ರಗ್ರಂಥಗಳ ಒಂದು ಪಕ್ಷಿನೋಟವನ್ನು ಕೊಡಲು ಬಹಳ ಸಂತಸವಾಗುತ್ತಿದೆ.

ಸಂಗೀತಕ್ಕೆ ಕರ್ನಾಟಕದ ಕೊಡುಗೆ, ಕೇವಲ ಗ್ರಂಥಗಳಿಗೇ ಮೀಸಲಾಗಿಲ್ಲ. ನಿಜವಾದ ಸಂಗತಿಯೆಂದರೆ ಈ ಗ್ರಂಥಕರ್ತರೆಲ್ಲರೂ ಪ್ರಾಯೋಗಿಕ ಸಂಗೀತದ ವಿದ್ವಾಂಸರೇ ಆಗಿದ್ದರೂ, ಕೆಲವರ ಸಂಗೀತ ರಚನೆಗಳನ್ನು ಬಿಟ್ಟರೆ, ಬಹುಪಾಲು ನಮಗೆ ದೊರೆಯುವಂತಿಲ್ಲವೆನ್ನುವುದೂ, ಕೆಲವೊಮ್ಮೆ ದೊರೆಯುವಾಗಲೂ, ಅವು ಹೆಚ್ಚಾಗಿ ವಾಡಿಕೆಯ ಬಳಕೆಯಲ್ಲಿ ಇಲ್ಲವೆನ್ನುವುದೂ ದುಃಖದ ಸಂಗತಿಯೇ. ಆದರೆ ಸಂಗೀತ ಎನ್ನುವುದು ಹರಿವ ನೀರಿನಂತೆ ತಾನೇ. ಹೊಸನೀರು ಬಂದು ಹಳೆಯ ನೀರನ್ನು ಕೊಚ್ಚಿಕೊಂಡು ಹೋಗುವುದು ಸತ್ಯವೇ. ಹಾಗಾಗಿ ಇದನ್ನೂ ನಾವು ಪರಂಪರೆಯ ಭಾಗವೆಂದುಕೊಳ್ಳುವುದೇ ಒಳಿತು.

ನಮಗೆ ತಿಳಿದಿರುವಂತೆ ಹಾಡುವ ಪರಂಪರೆಯನ್ನೂ ನೋಡೋಣ. ಕರ್ನಾಟಕದ ಶಿವಶರಣರ ರಚನೆಗಳನ್ನು ವಚನ ಎನ್ನುತ್ತೇವೆ. ವಚನಗಳು ಛಂದೋಬದ್ಧವಾಗಿಲ್ಲದೇ ಅವನ್ನು ಮಾತಿನಂತೆ ಹೇಳುತ್ತಿದ್ದರು ಎಂಬ ಅಭಿಪ್ರಾಯ ಮೂಡಿದ್ದರೂ ಒಂದು ಮಟ್ಟಕ್ಕೆ ವಚನಗಳನ್ನೂ ಹಾಡುತ್ತಿದ್ದರು ಎಂಬ ಊಹೆಯನ್ನು ನಾವು ಮಾಡಬಹುದು. ಏಕೆಂದರೆ, ಸಂಗೀತವೆಂಬುದು ಮಾನವ ಸ್ವಭಾವಕ್ಕೆ ಸಹಜ. ಎಲ್ಲ ಮತ ಪ್ರಚಾರಕರೂ ಒಂದಲ್ಲ ಒಂದು ಮಟ್ಟಿಗೆ ತಮ್ಮ ವಿಚಾರಧಾರೆಗಳನ್ನು ಜನರಿಗೆ ಮುಟ್ಟಿಸಲು ಸಂಗೀತದ ಸಹಾಯವನ್ನು ಪಡೆದೇ ಇದ್ದಾರೆ. ಅದಲ್ಲದೆ ವಚನಗಳಲ್ಲೇ ನಾವು ಅವುಗಳನ್ನು ಹಾಡುತ್ತಿದ್ದ ಬಗ್ಗೆ ಸಾಕ್ಷಿಗಳನ್ನು ಕಾಣಬಹುದು. ಕೆಲವು ಉದಾಹರಣೆಗಳನ್ನು ಎತ್ತಿ ತೋರುವುದಾದರೆ ಬಸವಣ್ಣನವರು ಒಂದು ವಚನದಲ್ಲಿ “ತಾಳಮಾನ ಸರಿಸವನರಿಯೆ, ಓಜೆ ಬಜಾವಣೆಯ ಲೆಕ್ಕವನರಿಯೆ, ಅಮೃತಗಣ ದೇವಗಣವನರಿಯೆ, ಕೂಡಲಸಂಗಮದೇವಾ, ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ” ಎಂದು ಹಲವಾರು ಪಾರಿಭಾಷಿಕ ಶಬ್ದಗಳನ್ನೂ ತರುತ್ತಾರೆ. ಇನ್ನೊಂದರಲ್ಲಿ, “ಎನ್ನ ಕಾಯವ ದಂಡಿಗೆಯ ಮಾಡಯ್ಯಾ, ಎನ್ನ ಶಿರವ ಸೋರೆಯ ಮಾಡಯ್ಯಾ, ಎನ್ನ ನರವ ತಂತಿಯ ಮಾಡಯ್ಯಾ, ಎನ್ನ ಬೆರಳ ಕಡ್ಡಿಯ ಮಾಡಯ್ಯಾ, ಬತ್ತೀಸ ರಾಗವ ಪಾಡಯ್ಯಾ, ಉರದಲೊತ್ತಿ ಬಾರಿಸು, ಕೂಡಲಸಂಗಮದೇವಾ” ಎಂದು ಕೋರುತ್ತಾರೆ.ಇನ್ನೊಂದರಲ್ಲಿ “ಹಾಡಿದರೆ ಎನ್ನೊಡೆಯನ ಹಾಡುವೆ, ಬೇಡಿದರೆ ಎನ್ನೊಡೆಯನ ಬೇಡುವೆ” ಎಂದು ಮೊರೆಯಿಡುತ್ತಾರೆ. ಸಿದ್ದರಾಮರು “ಹಾಡುವುದೊಂದೆ ವಚನ, ನೋಡುವುದೊಂದೆ ವಚನ” ಎಂದಿದ್ದಾರೆ. ಅಕ್ಕಮಹಾದೇವಿ “ಇಂದೆನ್ನ ಮನೆಗೆ ಒಡೆಯರು ಬರಲು .. ಆನಂದದೊಡನೆ ಕುಣಿಕುಣಿದಾಡುವೆ,ಪರವಶದೊಡನೆ ಹಾಡುವೆ, ಭಕ್ತಿಯೊಡನೆ ಎರಗುವೆ” ಎಂದಿದ್ದಾರೆ. ಒಟ್ಟಿನಲ್ಲಿ ವಚನಕಾರರಿಗೂ ಸಂಗೀತದೊಡನೆ ಸಹಜ ಸಂಬಂಧ ಇತ್ತೆಂದು ಹೇಳಬಹುದು.

ಇನ್ನು ಅವರಿಗಿಂತ ತುಸು ಮುಂದೆ ಬಂದರೆ ಹರಿದಾಸರು ವಚನಕಾರರಿಗಿಂತ ತುಂಬ ಹೆಚ್ಚಿನ ಮಟ್ಟದಲ್ಲಿ ಸಂಗೀತವನ್ನು ತಮ್ಮ ಬಾಳಿನ ಭಾಗವಾಗಿಸಿಕೊಂಡಿದ್ದರು ಸುಪ್ರಸಿದ್ಧ. ಹಲವು ಹೊಸರೀತಿಯ ಸಂಗೀತ ರಚನೆಗಳನ್ನೂ ಮುಂಚೂಣಿಗೆ ತಂದು ನಿಲ್ಲಿಸಿದ ಖ್ಯಾತಿ ಹರಿದಾಸ ಪರಂಪರೆಗಿದೆ. ಸುಮಾರು ಹದಿನಾಲ್ಕನೇ ಶತಮಾನದಿಂದ ಇಪ್ಪತ್ತನೇ ಶತಮಾನದ ವರೆಗೆ ಹರಿದಾಸರ ಪರಂಪರೆ ನಮ್ಮ ರಾಜ್ಯದಲ್ಲಿ ನಿಲ್ಲದೇ ಹರಿದು ಬಂತು. ಸಂಗೀತದ ಬಾಲಪಾಠಗಳನ್ನು ಸಿದ್ಧಪಡಿಸಿದ್ದರೆಂಬ ಕಾರಣಕ್ಕೆ ಪುರಂದಸದಾಸರನ್ನು ಕರ್ನಾಟಕಸಂಗೀತಪಿತಾಮಹ ಎಂದು ಕೂಡ ಕರೆಯುತ್ತೇವೆ. ಹಾಗಾಗಿ, ಇಲ್ಲಿ ಹರಿದಾಸರ ಕೊಡುಗೆಯನ್ನು ಹೆಚ್ಚಾಗಿ ವಿಸ್ತರಿಸಲು ಹೋಗುವುದಿಲ್ಲ. ಇಂದಿನ ಕರ್ನಾಟಕ ಸಂಗೀತದ ಮುಖ್ಯ ರಚನಾ ಪ್ರಕಾರಗಳಾದ ಕೃತಿ, ಪದ, ಜಾವಳಿ, ರಾಗಮಾಲಿಕೆ ಮೊದಲಾದುವುಗಳಿಗೆ ತಕ್ಕ ತಳಹದಿ ಹಾಕಿಕೊಟ್ಟಿದ್ದು ಹರಿದಾಸರ ಸಂಗೀತ ಎಂಬುದು ಖಚಿತ. , ಆ ಸಮಯಕ್ಕೇ ತೆಲುಗು ಭಾಷೆಯಲ್ಲೂ ಪದಗಳ ಪರಂಪರೆ ಆರಂಭವಾಗಿದ್ದರೂ, ಅವಕ್ಕೆ ವೈಶಾಲ್ಯವನ್ನು ತಂದುಕೊಟ್ಟದ್ದು ಹರಿದಾಸರ ರಚನೆಗಳು.ತ್ಯಾಗರಾಜರಂಥ ವಾಗ್ಗೇಯಕಾರರು, ಪುರಂದರದಾಸರನ್ನು ಸ್ಮರಿಸಿರುವುದೇ ಇದಕ್ಕೆ ಸಾಕ್ಷಿ.

ಇದರ ನಂತರ ಕರ್ನಾಟಕದಲ್ಲಿ ೧೮ನೆಯ ಶತಮಾನದ ನಂತರ ಹಲವಾರು ವಾಗ್ಗೇಯಕಾರು ಆಗಿಹೋಗಿದ್ದಾರೆ. ಈ ರಚನೆಗಳಲ್ಲಿ ಕರ್ನಾಟಕದಲ್ಲಿ ಅಥವಾ ಇತರ ರಾಜ್ಯಗಳಲ್ಲಿ ಮಾಡಿರುವಂಥವುಗಳಲ್ಲಿ ಹೆಚ್ಚು ವ್ಯತ್ಯಾಸವಿಲ್ಲದಿರುವುದರಿಂದ ಅವುಗಳ ಬಗ್ಗೆ ಇಲ್ಲಿ ಬರೆಯಲು ಹೋಗುತ್ತಿಲ್ಲ.

ಇಪ್ಪತ್ತನೆಯ ಶತಮಾನದಲ್ಲಿ, ಹೊಸ ಬಗೆಯ ಸಂಗೀತ ಪ್ರಕಾರಗಳು ಭಾರತದ ಎಲ್ಲೆಡೆಯೂ ಬೆಳೆದುಬಂದಂತೆ ಕರ್ನಾಟಕದಲ್ಲೂ ಬೆಳೆದು ಬಂದಿವೆ. ಇವುಗಳಲ್ಲಿ ಪ್ರಮುಖವಾದುವು ಚಲನಚಿತ್ರ ಸಂಗೀತ ಮತ್ತು ಸುಗಮ ಸಂಗೀತಗಳು. ಕನ್ನಡ ಚಲನಚಿತ್ರ ಸಂಗೀತ ಮೊದಮೊದಲು ಹೆಚ್ಚಾಗಿ ನಾಟಕಗಳ ಸಂಗೀತದಿಂದ ಪ್ರೇರಿತವಾಗಿದ್ದು ಹೆಚ್ಚಾಗಿ ಕರ್ನಾಟಕ ಸಂಗೀತಕ್ಕೇ ಹತ್ತಿರವಾಗಿದ್ದು, ನಂತರ ಕಾಲಾನುಕ್ರಮದಲ್ಲಿ ಪಾಶ್ಚಾತ್ಯ ಸಂಗೀತ, ಮತ್ತೆ ಹಿಂದೂಸ್ತಾನಿ ಸಂಗೀತ ಎರಡರಿಂದಲೂ ಅಂಶಗಳನ್ನು ಒಳಗೊಂಡು ಬೆಳೆದು ಬಂದಿದೆ. ಆದರೆ ಕನ್ನಡ ಚಲನಚಿತ್ರ ಸಂಗೀತವು ಬೇರೆ ಭಾಷೆಗಳ ಚಲನಚಿತ್ರ ಸಂಗೀತಕ್ಕಿಂತ ವಿಭಿನ್ನವಾಗಿ, ಅಥವಾ ವಿಶಿಷ್ಟವಾಗಿ ಏನೂ ಉಳಿದಿಲ್ಲ. ಆದರೆ ಸುಗಮ ಸಂಗೀತವು ಕರ್ನಾಟಕದಲ್ಲಿ ಪ್ರಖ್ಯಾತವೂ ಆಗಿದ್ದು, ಬೇರೆ ರಾಜ್ಯಗಳಲ್ಲಿ ಇರುವುದಕ್ಕಿಂತ ಹೆಚ್ಚು ಅರ್ಥಪೂರ್ಣವಾಗಿದೆ. ಇದಕ್ಕೆ ಕರ್ನಾಟಕದ ಹಿನ್ನೆಲೆಯೂ ಒಂದು ಕಾರಣ ಇರಬಹುದು. ಏಕೆಂದರೆ ಕರ್ನಾಟಕ ಸಂಗೀತಕ್ಕೆ ಸಂಬಂಧ ಉಳ್ಳದ್ದೇ ಆಗಿ, ಕಾವ್ಯಗಳನ್ನು ಅರ್ಥ ಸ್ಫುರಿಸುವಂತೆ ವಾಚಿಸುವ , ಎಂದರೆ ಸಾಹಿತ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟು, ತುಸುವೇ ಸಂಗೀತದೊಡನೆ ಅವುಗಳನ್ನು ಓದುವ ಕಲೆ ಕಾವ್ಯ ವಾಚನ ಕಲೆ (ಗಮಕ ಕಲೆ ಎಂದೂ ಹೇಳುವುದುಂಟು) ಕರ್ನಾಟಕದಲ್ಲಿ ಶತಮಾನಗಳಿಂದ ಸುಪರಿಚಿತ. ವಾಲ್ಮೀಕಿ ರಾಮಾಯಣದಲ್ಲೇ ಲವ ಕುಶರು ವಾಲ್ಮೀಕಿಯ ಕಾವ್ಯವನ್ನು ಎಲ್ಲರ ಮನಮುಟ್ಟುವಂತೆ ಹಾಡಿದರು ಎಂಬ ಮಾತಿರುವುದರಿಂದ, ಹಿಂದೆ ಭಾರತದಲ್ಲೆಲ್ಲ ಪ್ರಖ್ಯಾತವಾಗಿದ್ದ ಈ ಕಾವ್ಯವಾಚನ ಕಲೆ ಕರ್ನಾಟಕವೊಂದರಲ್ಲಿ ಮಾತ್ರ ಹೆಚ್ಚು ಪ್ರಚಲಿತದಲ್ಲಿ ಇದೆ ಎನ್ನಬಹುದು. ಸುಗಮ ಸಂಗೀತವು ಒಂದು ಕಡೆ ಈ ಗಮಕ ಕಲೆ, ಇನ್ನೊಂದು ಕಡೆ ಚಲನಚಿತ್ರ ಸಂಗೀತ — ಎರಡರಿಂದಲೂ ಪ್ರಭಾವಿತವಾಗಿ ಬೆಳೆದು ಬಂದಿದೆ ಎಂದರೆ ತಪ್ಪಾಗಲಾರದು. .

ಇವತ್ತಿನ ಕಾಲಕ್ಕೆ ಬಂದರೆ ಕರ್ನಾಟಕ ರಾಜ್ಯವು ಕರ್ನಾಟಕ ಸಂಗೀತಕ್ಕೂ, ಹಿಂದೂಸ್ತಾನಿ ಸಂಗೀತಕ್ಕೂ ತಕ್ಕುದಾದ ಪ್ರೋತ್ಸಾಹವನ್ನೂ, ಕೇಳುಗರನ್ನೂ ಒದಗಿಸುತ್ತಾ ಬಂದಿದೆ ಎಂಬುದು ಸತ್ಯ. ಆದರೆ ಕರ್ನಾಟಕ ಸಂಗೀತಕ್ಕೆ ಈಗ ಕಾಣಿಸುತ್ತಿರುವುದಕ್ಕಿಂತ ಹೆಚ್ಚಿನ ಪ್ರೋತ್ಸಾಹ ಬೇಕು ಎಂದು ನನ್ನ ಕಳಕಳಿ. ರಾಜ್ಯದವರೇ ಉತ್ತಮ ಕಲಾವಿದರು ಇದ್ದಾಗಲೂ ಹೊರಗಡೆಯ ಕಲಾವಿದರನ್ನೇ ದೊಡ್ಡ ವೇದಿಕೆಗಳಲ್ಲಿ ಹೆಚ್ಚಾಗಿ ಅಹ್ವಾನಿಸುವ ಪ್ರವೃತ್ತಿಯನ್ನು ಕರ್ನಾಟಕವೊಂದರಲ್ಲೇ ನೀವು ಕಾಣುವುದು. ಒಳ್ಳೆಯ ಸಂಗೀತಕ್ಕೆ ದೇಶ-ಭಾಷೆಯ ಕಟ್ಟು ಇಲ್ಲದೇ ಇದ್ದರೂ, ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ನಮ್ಮ ಕಲಾವಿದರಿಗೇ ನಾವು ಮಣೆ ಹಾಕದಿದ್ದರೆ, ಯಾರು ಹಾಕುತ್ತಾರೆ ಎಂಬ ಪ್ರಶ್ನೆಯನ್ನು ನಮಗೇ ನಾವು ಕೇಳಿಕೊಳ್ಳಬೇಕು.

-ಹಂಸಾನಂದಿ

ಕೊ: ಪ್ರಸಿದ್ಧ ಸಂಗೀತಗಾರ ಮತ್ತು ಸಂಗೀತ ಶಾಸ್ತ್ರಜ್ಞ ವಿದ್ವಾನ್ ಶ್ರೀ ಶ್ರೀಕಾಂತಮ್ ನಾಗೇಂದ್ರಶಾಸ್ತ್ರಿ ಅವರ ಐವತ್ತನೇ ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ “ಶಾಸ್ತ್ರೀಯ ಸುವರ್ಣ ಸೌರಭ” ಎಂಬ ಉತ್ತಮ ಅಭಿನಂದನ ಗ್ರಂಥದ ಜೊತೆಗೆ ಸಂಗೀತಾಭ್ಯಾಸಿಗಳಿಗೆ ಬಹುಮೂಲ್ಯವಾದ ಇನ್ನೂ ಕೆಲವು ಪುಸ್ತಕಗಳು ಪ್ರಕಟವಾಗಿವೆ. ಹಿರಿಯ ಸಂಗೀತ ವಿಶಾರದ ವಿದ್ವಾಂಸ ವಿದುಷಿಯರ ಲೇಖನಗಳು ಇರುವ ಈ ಗ್ರಂಥದಲ್ಲಿ, ನನ್ನ ಈ ಬರಹವೂ ಪ್ರಕಟವಾಗಿದೆ ಎಂಬುದು ವೈಯಕ್ತಿಕವಾಗಿ ನನಗೆ ಬಹಳ ಸಂತಸ ತಂದ ಸಂಗತಿ.

ಕೊ.ಕೊ::ಸಂಶೋಧನಾತ್ಮಕ ಲೇಖನಗಳುಳ್ಳ ಈ ಅಭಿನಂದನ ಗ್ರಂಥವನ್ನು ಪಡೆಯಲು ಇಚ್ಛಿಸುವವರು ದಯವಿಟ್ಟು ಪ್ರಕಾಶಕರನ್ನು ಸಂಪರ್ಕಿಸಿ -ಇ-ಮೇಲ್ ಅಡ್ರೆಸ್ — umeshnagamangala at gmail dot com)

--

--

Hamsanandi

ಕನ್ನಡಿಗ,Chomayiphile,Bibliophile,Astrophile,BMKphile, Musicphile,Tyagarajaphile,Agatha-phile, Blogophile,Twitterphile and now a Playwright /play director :-P