ಕಾವ್ಯಗಳಲ್ಲಿ ಪ್ರಕ್ಷಿಪ್ತ ಭಾಗಗಳು ಮತ್ತು ಪಾಠಾಂತರಗೊಳ್ಳುವಿಕೆ

Hamsanandi
4 min readJun 30, 2023

ಭಾರತೀಯ ಕಾವ್ಯಗಳಲ್ಲಿ ಪಾಠಾಂತರ, ಪ್ರಕ್ಷಿಪ್ತ ಪದ್ಯಗಳ ಬಗ್ಗೆ ಒಂದು ಟಿಪ್ಪಣಿ ಇದು. ಉದಾಹರಣೆ ಕನ್ನಡದ್ಧಾಗಿದ್ದರೂ, ಬೇರೆ ಭಾಷೆಗಳಿಗೂ ಇಲ್ಲಿರುವ ವಿವರ ಹೊಂದಿಕೆಯಾಗುತ್ತದೆ.

ನಮ್ಮ ಪ್ರಾಚೀನ ಕಾವ್ಯ-ಇತಿಹಾಸಗಳಲ್ಲಿ ಮೂಲದಲ್ಲಿ ಇಲ್ಲದ ವಿಷಯಗಳನ್ನು ನಂತರ ಸೇರಿಸಿದ್ದಾರೆ ಎಂದೂ, ಹಾಗಾಗಿ ಅವುಗಳು ನಂಬಲಿಕ್ಕೆ ಅನರ್ಹ ಎಂಬ ಅಭಿಪ್ರಾಯಗಳನ್ನೂ ನೀವು ಕೇಳಿರಬಹುದು.

ಹೀಗೆ ಪದ್ಯಗಳನ್ನು ಎಷ್ಟೋ ಕಡೆ ಸೇರಿಸಿರುವುದು ನಿಜವೇ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಹೀಗೆ ಸೇರಿಸಿರುವ ವಿಷಯಗಳಿಂದ ಕೆಲವೊಮ್ಮೆ ಕಾವ್ಯಗುಣವು ಕಳೆಗುಂದಬಹುದು, ಕೆಲವೊಮ್ಮೆ ಹೆಚ್ಚಲೂಬಹುದು.

ಹೀಗೆ ಸೇರಿಸಿರುವ ಪದ್ಯಗಳಿಗೆ ಪ್ರಕ್ಷಿಪ್ತ ( = (ಮತ್ತೊಬ್ಬರು) ಇಟ್ಟಿದ್ದು ) ಪದ್ಯಗಳೆಂದು ಹೆಸರು. ಅಂದರೆ ಮೂಲ ಕವಿ ಬರೆಯದೇ ಇದ್ದದ್ದನ್ನು ಇನ್ನಾರೋ ಬರೆದಿಟ್ಟಿದ್ದಾರೆ ಎಂದು ಅರ್ಥ. ಇದೇ ಅರ್ಥದಲ್ಲಿ ಸಂಗೀತ ರಚನೆಗಳಲ್ಲೂ ಕೂಡ, ಒಬ್ಬ ವಾಗ್ಗೇಯಕಾರನ ಮುದ್ರೆಯನ್ನು ಮತ್ತೊಬ್ಬರು ಬಳಸಿ ಮಾಡಿರುವ ರಚನೆಯನ್ನು ಪ್ರಕ್ಷಿಪ್ತ ರಚನೆ ಎನ್ನುವರು. ತ್ಯಾಗರಾಜರ, ಮುತ್ತುಸ್ವಾಮಿ ದೀಕ್ಷಿತರ ಮುದ್ರೆ ಇರುವಂತಹ ಕೆಲವು ರಚನೆಗಳಾದರೂ ಪ್ರಕ್ಷಿಪ್ತ ಕೃತಿಗಳೆಂದು ಪರಿಣತರು ಗುರುತಿಸಿದ್ದಾರೆ.

ಕಾವ್ಯಗಳಲ್ಲಿ, ಇನ್ನೊಬ್ಬ ಕವಿ ಸೇರಿಸಿದ ಪದ್ಯಗಳು ಮೊದಲಿಗೆ ಒಂದು ಪ್ರತಿಯಲ್ಲಿ ಸೇರಿಕೊಳ್ಳುತ್ತಿತ್ತು. ಹಿಂದೆ ಮುದ್ರಣವಿಲ್ಲದ ಕಾಲದಲ್ಲಿ, ಕಾವ್ಯಗಳ ಪ್ರತಿಗಳು ಕಾಲ ಕಾಲಕ್ಕೆ ಮರುಪ್ರತಿ ಆಗುತ್ತಿದ್ದವು. ಹಾಗಾಗಿ ಐವತ್ತು ನೂರು ವರ್ಷಗಳ ನಂತರ ಕೆಲವು ಪ್ರತಿಗಳಲ್ಲಿ ಮಾತ್ರ ಈ ಸೇರಿಸಿದ ಭಾಗಗಳು ಉಳಿದಿರುತ್ತವೆ. ಇನ್ನು ಹಲವು ಪ್ರತಿಗಳಲ್ಲಿ ಈ ಭಾಗವು ಇರುವುದಿಲ್ಲ. ಕಾಲಾನುಕ್ರಮದಲ್ಲಿ, ಈ ರೀತಿ ನಾಲ್ಕಾರು ಕಡೆ ಸೇರ್ಪಡೆ ಆದರೆ ಆ ಒಂದು ಕಾವ್ಯದ ಹಸ್ತಪ್ರತಿಗಳಲ್ಲೇ ಒಂದಕ್ಕೊಂದಕ್ಕೆ ವ್ಯತ್ಯಾಸ ಉಂಟಾಗುತ್ತದೆ. ಇಂಥದಕ್ಕೇ ‘ಪಾಠಾಂತರ’ಗಳು ಎನ್ನುತ್ತೇವೆ. ಇದಲ್ಲದೆ ಪ್ರತಿಗಳನ್ನು ಒಂದನ್ನೊಂದು ನೋಡಿ ಬರೆಯುವಾಗ ತಪ್ಪುಗಳಾಗಬಹುದು, ಒಂದೇ ರೀತಿ ಕಾಣುವ ಅಕ್ಷರಗಳಿಂದ ಒಂದು ಪದದ ಬದಲು ಆ ಸಂದರ್ಭಕ್ಕೆ ತಕ್ಕದೇ ಆದ ಇನ್ನೊಂದು ಪದ ಬಂದು ಕೂರಬಹುದು. ಇದೂ ಕೂಡ ಪದ್ಯಗಳ ಪಾಠಾಂತರಕ್ಕೆ ಒಂದು ಕಾರಣವೇ. ಕಾವ್ಯಗಳನ್ನು ಸಂಪಾದಿಸುವವರು ಇಂಥದಕ್ಕೆಲ್ಲ ಗಮನವಿತ್ತು, ಒಂದು ಕಾವ್ಯದಲ್ಲಿ ಪ್ರಕ್ಷಿಪ್ತ ಭಾಗಗಳು ಉಂಟೇ, ಇದ್ದರೆ ಯಾವುವು ಎಂದು ಗುರುತಿಸುತ್ತಾರೆ. ಸಾಮಾನ್ಯವಾಗಿ ಭಾಷೆಯ ಶೈಲಿಯಿಂದ, ಪದಗಳ ಆಯ್ಕೆಯಿಂದ, ಬೇರೆ ಬೇರೆ ಕಾಲದಲ್ಲಿ ಆದ ಪ್ರಕ್ಷಿಪ್ತಗಳನ್ನು ಗುರುತಿಸಬಹುದು. ಹಾಗಿದ್ದಲ್ಲಿಯೂ, ಇಂದು ಪ್ರಕಟವಾಗಿರುವ ಹಲವು ಕಾವ್ಯಗ್ರಂಥಗಳಲ್ಲಿ ಕೆಲವಾದರೂ ಪ್ರಕ್ಷಿಪ್ತ ಭಾಗಗಳು ಉಳಿದುಕೊಂಡಿವೆ ಎಂದು ವಿದ್ವಾಂಸರ ಅಭಿಪ್ರಾಯ.

ಆದರೆ ಇಂತಹ ಪ್ರಕ್ಷಿಪ್ತ ಪದ್ಯಗಳು ಎಲ್ಲ ಸಮಯದಲ್ಲೂ ತಪ್ಪೇ ಆಗಿರಬೇಕು ಎಂದೇನಿಲ್ಲ. ಅವುಗಳನ್ನು ಸೇರಿಸಲು ಕಾರಣಗಳೂ ಇದ್ದಿರಬಹುದು. ಕೆಲವೊಮ್ಮೆ ದೇಶಕಾಲಗಳ ಆಚರಣೆಗೆ ಹೊಂದಲು, ಕಾವ್ಯದ ಸಂದರ್ಭಕ್ಕೆ ಹೆಚ್ಚಿನ ಒತ್ತುಕೊಡಲು ಇಂತಹ ಸೇರ್ಪಡೆಗಳಾಗಿವೆ. ಹಲವು ಬಾರಿ ಇವು ಪೂರಕವಾಗಿಯೂ ಇರಬಹುದು ಎಂಬುದಕ್ಕೆ ಈಗ ಒಂದು ಉದಾಹರಣೆಯನ್ನು ನೋಡೋಣ.

ವ್ಯಾಸರ ಮಹಾಭಾರತದಲ್ಲಿ ಅರಗಿನ ಮನೆಯ ಪ್ರಸಂಗ ಬರುವಾಗ, ದುರ್ಯೋಧನನ ದುಷ್ಟ ಆಲೋಚನೆಗಳ ಸಂಶಯ ಹತ್ತಿದ್ದ ವಿದುರನು , ವಾರಣಾವತಕ್ಕೆ ಹೊರಟಿರುವ ಯುಧಿಷ್ಟಿರನಿಗೆ “ಕಾಡಿಗೆ ಕಾಳ್ಗಿಚ್ಚು ಹೊತ್ತಿದಾಗ, ಎಲ್ಲ ಪ್ರಾಣಿಗಳನ್ನೂ ಅದು ನಾಶ ಮಾಡುವುದಾದರೂ, ಬಿಲದೊಳಗೆ ವಾಸಿಸುವ ಹಾವು ಇಲಿ ಮೊದಲಾದ ಪ್ರಾಣಿಗಳು ಆ ಬೆಂಕಿಯಿಂದ ಪಾರಾಗಬಹುದು; ಪಾರಾಗಿ ನೆಲೆಗಾಣದೆ ಅಲೆಯುತ್ತಿದ್ದವರೂ, ನಕ್ಷತ್ರಗಳ ಸಹಾಯದಿಂದ ದಿಕ್ಕುಗಳ ಪರಿಚಯ ಮಾಡಿಕೊಂಡಿದ್ದರೆ ಇತರರಿಂದ ಪೀಡಿತರಾಗುವುದಿಲ್ಲ “ ಎಂಬ ಅರ್ಥ ಬರುವ ಮಾತುಗಳನ್ನು ವಿದುರನು ಆಡಿ ಸಂಕೇತದಲ್ಲಿ ಯುಧಿಷ್ಟಿರನಿಗೆ ಬರುವ ಅಪಾಯವನ್ನೂ, ಅದರಿಂದ ತಪ್ಪಿಸಿಕೊಳ್ಳುವ ದಾರಿಯನ್ನೂ ಹೇಳುತ್ತಾನೆ.

ಮಹಾಕವಿ ಕುಮಾರವ್ಯಾಸನು ವ್ಯಾಸಭಾರತವನ್ನು ಕನ್ನಡಕ್ಕೆ ತಂದಿರುವುದು ಸರಿಯಷ್ಟೆ. ಅಲ್ಲಿ ಅವನು ಕೇವಲ “ವಿದುರನು ಸಂಕೇತದಲಿ ಸೂಚಿಸಿದನು” ಎಂದಷ್ಟೇ ಹೇಳುವನಲ್ಲದೆ, ವ್ಯಾಸರು ಕೊಡುವ ಬಿಲದೊಳಗೆ ವಾಸಿಸುವ ಪ್ರಾಣಿಗಳು ಬದುಕಬಹುದು ಎಂಬ ಮಾತನ್ನು ಹೇಳುವುದಿಲ್ಲ.

ಆ ಸಂದರ್ಭದಲ್ಲಿ ಬರುವ ಪದ್ಯಗಳನ್ನು ಒಮ್ಮೆ ನೋಡೋಣ:

ಧಾರುಣೀಪತಿ ರತ್ನಮಯ ಭಂ

ಡಾರಸಹಿತ ಗಜಾಶ್ವರಥಪರಿ

ವಾರವನು ಮಾಡಿದನು ಹಸುಗೆಯನೆರಡು ಭಾಗವನು

ಕೌರವರಿಗೊಂದಿವರಿಗೊಂದೆನೆ

ಲೋರಣದಲಳವಡಿಸಿ ಬಹುವಿ

ಸ್ತಾರದಲಿ ಭೀಷ್ಮಾದ್ಯರಹುದೆನಲಿವರ ಮನ್ನಿಸಿದ

(ಆದಿ ಪರ್ವ, ೮ ಸಂಧಿ, ೭೯ ಪದ್ಯ)

ತಾತ್ಪರ್ಯ: ಧೃತರಾಷ್ಟ್ರನು ಆತನ ಭಂಡಾರವನ್ನು, ಕುದುರೆ, ಆನೆ, ರಥಗಳೆಂಬ ಸೈನ್ಯಭಾಗವನ್ನು,ಕೌರವರಿಗೂ ಪಾಂಡವರಿಗೂ ಸಮ ಸಮವಾಗಿ ಹಂಚಿಕೊಟ್ಟನು. ಭೀಷ್ಮನೆ ಮೊದಲಾದವರು ಈ ನಿಷ್ಪಕ್ಷಪಾತ ನಿಲುವನ್ನು ಹೊಗಳಿದರು.

ಇವರು ಶುಭದಿನ ಶುಭಮುಹೂರ್ತ

ಪ್ರವರದಲಿ ಹೊರವಂಟರಾ ಜನ

ನಿವಹ ಮರುಗಿತರಣ್ಯವೇ ಗತಿಯರಸ ನಮಗೆಂದು

ಅವರ ಕಳುಹುತ ಬಂದರಾ ಕೌ

ರವರು ನಿಂದರು ಭೀಷ್ಮ ಕಲಶೋ

ದ್ಭವರು ಸುತರಿಗೆ ಬುದ್ಧಿ ಹೇಳಿದು ಮರಳಿದರು ಪುರಕೆ

(ಆದಿ ಪರ್ವ, ೮ ಸಂಧಿ, ೮೦ ಪದ್ಯ)

ತಾತ್ಪರ್ಯ: ನಂತರ,ಪಾಂಡವರು ಒಳ್ಳೆಯ ದಿನ ಮತ್ತು ಮುಹೂರ್ತವನ್ನು ನೋಡಿ ಹಸ್ತಿನಾವತಿಯಿಂದ ವಾರಣಾವತಿಗೆ ಪ್ರಯಾಣ ಬೆಳಸಿದರು. ಪುರಜನರು ದುಃಖದಿಂದ ನೀವು ಹೋದ ಮೇಲೆ ನಮಗೆ ಅರಣ್ಯವೇ ಗತಿ ಯೆಂದು ರೋದಿಸಿದರು. ಪಾಂಡವರನ್ನು ಬೀಳ್ಕೊಟ್ಟ ಕೌರವರು ಒಂದೆಡೆ ನಿಂದರೆ, ಭೀಷ್ಮ, ದ್ರೋಣ ಪಾಂಡವರಿಗೆ ಬುದ್ಧಿಮಾತು ಹೇಳಿ ಪುರಕ್ಕೆ ಬಂದರು.

ಹುಲ್ಲೊಣಗೆ ಬರಿ ಕಿಡಿಯು ಕಾಡೊಳ

ಗೆಲ್ಲ ಜೀವಿಗಳನ್ನು ಸುಡುವುದು

ಹುಲ್ಲೆ ಹುಲಿ ನರಿ ಆನೆ ಚಿರತೆಯನೊಂದನುಳಿಸದೆಯೆ

ಬಲ್ಲೆಯೇನೀ ಕಾಡಗಿಚ್ಚೊಳ

ಗಿಲ್ಲಿ ಬದುಕುಳಿದಾವು ಬಿಲದೊಳ

ಗೆಲ್ಲೊ ಅವಿತಿಹ ಹೆಗ್ಗಣವು ಇಲಿ ಹಾವು ಇರುವೆಗಳು

ತಾತ್ಪರ್ಯ: ಕಾಡಿಗೆ ಕಾಳ್ಗಿಚ್ಚು ಹೊತ್ತಿದಾಗ, ಎಲ್ಲ ಪ್ರಾಣಿಗಳನ್ನೂ ಅದು ನಾಶ ಮಾಡುವುದಾದರೂ, ಬಿಲದೊಳಗೆ ವಾಸಿಸುವ ಹಾವು ಇಲಿ ಮೊದಲಾದ ಪ್ರಾಣಿಗಳು ಆ ಬೆಂಕಿಯಿಂದ ಪಾರಾಗಬಹುದು.

ಜೀವವುಳಿದಿರಲೊಡನೆ ದೂರಕೆ

ಧಾವಿಸುತ ತಾರೆಗಳನಾಗಸ

ದೀವಿಗೆಯೆನುತ ದಿಕ್ಕನರಿತವ ದಾರಿಗಾಂಬವನು

ಠಾವಿಸಿರೆ ತನ್ನಿಂದ್ರಿಯಂಗಳ

ನೈವನೂ ಮನದೊಳಗೆ ಪರರಿಂ

ದಾವ ಪೀಡೆಯು ಬಾಧಿಸವು ಅರಿಯಯ್ಯ ಯಮಸೂನು

ತಾತ್ಪರ್ಯ: ಜೀವ ಉಳಿಸಿಕೊಂಡು ಓಡುವಾಗ, ರಾತ್ರಿಯಲ್ಲಿ ನಕ್ಷತ್ರಗಳೇ ದಿಕ್ಕನ್ನು ತೋರಿಸುವ ದೀಪವಿದ್ದಂತೆ. ಪಂಚೇಂದ್ರಿಯಗಳನ್ನು ಮನದೊಳಗೆ ವಶಮಾಡಿಟ್ಟುಕೊಂಡವರಿಗೆ ಪರರಿಂದ ಯಾವ ಪೀಡೆ ತಾನೇ ತಗುಲಬಹುದು?

ವಿದುರನೊಡನೈತರುತ ಸಂಕೇ

ತದಲಿ ಸೂಚಿಸಿ ಮರಳಿದನು ನೃಪ

ಸುದತಿ ವರಗಾಂಧಾರಿ ಮೊದಲಾದಖಿಳ ರಾಣಿಯರು

ಮುದದ ಮುರುವಿನಲಿವರ ತೆಗೆದ

ಪ್ಪಿದರು ಭೂಪತಿ ಸಹಿತ ಕಡು ಶೋ

ಕದಲಿ ಕಳುಹಿಸಿಕೊಂಡು ಬಂದರು ಹಸ್ತಿನಾಪುರಕೆ

(ಆದಿ ಪರ್ವ, ೮ ಸಂಧಿ, ೮೧ ಪದ್ಯ)

ತಾತ್ಪರ್ಯ: ಈ ರೀತಿ ವಿದುರನು ಪಾಂಡವರಿಗೆ ಸಂಕೇತದಲ್ಲಿ ವಸ್ತುಸ್ಥಿತಿಯನ್ನು ಸೂಚಿಸಿ ಹಿಂದಿರುಗಿದನು. ಗಾಂಧಾರಿಯೇ ಮೊದಲಾದ ರಾಣಿಯರು ಸಂತೋಷರಹಿತರಾಗಿ ಪಾಂಡವರನ್ನು ಅಪ್ಪಿಕೊಂಡು ಧೃತರಾಷ್ತ್ರನೊಡನೆ ಶೋಕಿಸುತ್ತಾ ಹಸ್ತಿನಾಪುರಕ್ಕ ಹಿಂದಿರುಗಿದರು.

ಅರರೆ! ವಿದುರ ಹೇಳಿದ ಹಾವು ಇಲಿಯ ಪದ್ಯವೂ, ತಾರೆಗಳಿಂದಲೇ ದಿಕ್ಕು ನೋಡುವ ಪದ್ಯಗಳೂ ಇವೆಯಲ್ಲ, ಮೊದಲು ಹೇಳಿದ್ದು ಇದಕ್ಕೆ ವ್ಯತಿರಿಕ್ತವಾಗಿತ್ತು ಎಂದಿರಾ? ಒಮ್ಮೆ ಪದ್ಯದ ಸಂಖ್ಯೆಗಳನ್ನು ಗಮನಿಸಿ ನೋಡಿ!

ಈ ಕೆಳಗಿನ ಎರಡೂ ಪದ್ಯಗಳು ಕುಮಾರವ್ಯಾಸನದ್ದಲ್ಲ! ಇವಕ್ಕೆ ಮೊದಲಿರುವುದು ೮೦ ನೇ ಪದ್ಯ. ಇವೆರಡರ ನಂತರದ್ದು ೮೧ನೇ ಪದ್ಯ. ಈ ನಡುವಿನ ಎರಡೂ ಷಟ್ಪದಿಗಳನ್ನು ನಾನೇ, ಈಗ ತಾನೇ ಬರೆದದ್ದು.

ಹುಲ್ಲೊಣಗೆ ಬರಿ ಕಿಡಿಯು ಕಾಡೊಳ

ಗೆಲ್ಲ ಜೀವಿಗಳನ್ನು ಸುಡುವುದು

ಹುಲ್ಲೆ ಹುಲಿ ನರಿ ಆನೆ ಚಿರತೆಯನೊಂದನುಳಿಸದೆಯೆ

ಬಲ್ಲೆಯೇನೀ ಕಾಡಗಿಚ್ಚೊಳ

ಗಿಲ್ಲಿ ಬದುಕುಳಿದಾವು ಬಿಲದೊಳ

ಗೆಲ್ಲೊ ಅವಿತಿಹ ಹೆಗ್ಗಣವು ಇಲಿ ಹಾವು ಇರುವೆಗಳು

ಜೀವವುಳಿದಿರಲೊಡನೆ ದೂರಕೆ

ಧಾವಿಸುತ ತಾರೆಗಳನಾಗಸ

ದೀವಿಗೆಯೆನುತ ದಿಕ್ಕನರಿತವ ದಾರಿಗಾಂಬವನು

ಠಾವಿಸಿರೆ ತನ್ನಿಂದ್ರಿಯಂಗಳ

ನೈವನೂ ಮನದೊಳಗೆ ಪರರಿಂ

ದಾವ ಪೀಡೆಯು ಬಾಧಿಸವು ಅರಿಯಯ್ಯ ಯಮಸೂನು

ಈ ಉದಾಹರಣೆ ಕೊಟ್ಟದ್ದು ಕಾವ್ಯಗಳಲ್ಲಿ ಪ್ರಕ್ಷಿಪ್ತಗಳು ಹೇಗೆ ಆಗಬಹುದು, ಆಗುತ್ತಿದ್ದವು ಎಂಬುದಕ್ಕೆ ಒಂದು ಕೈಗನ್ನಡಿಯಾಗಿ ಅಷ್ಟೇ. ಕುಮಾರವ್ಯಾಸನ ಬಗ್ಗೆ ನನಗೆ ಇರುವ ಗೌರವ ಪ್ರೀತಿಗಳು ಇದರಿಂದ ಎಳ್ಳಷ್ಟೂ ಕಡಿಮೆಯಾಯಿತು ಎಂದುಕೊಳ್ಳದಿರಿ. ನಾನು ಬರೆದ ಪದ್ಯಗಳಲ್ಲಿ ಹೊಸಗನ್ನಡ ಛಾಯೆ ಹೆಚ್ಚಾಗಿ ಕಾಣಬಹುದು. ಹಾಗಾಗಿ ಪರಿಣತರು ಇಲ್ಲಿ ಸೇರಿಸಿರುವ ಪದ್ಯಗಳನ್ನು ಸುಲಭವಾಗಿಯೇ ಗುರುತಿಸಲೂ ಬಹುದು. ಆದರೆ, ಹಿಂದಿನ ಕಾಲದಲ್ಲಿ ಕುಮಾರವ್ಯಾಸನ ನಂತರದಲ್ಲಿ, ಆದರೆ ಅವನ ಕಾಲಕ್ಕೆ ಹತ್ತಿರವಾಗಿ ಓರ್ವ ಕವಿ, ಆತನ ಶೈಲಿಯನ್ನು ತುಂಬಾ ಚೆನ್ನಾಗಿ ಮೈಗೂಡಿಸಿಕೊಂಡಿದ್ದು ಇಂತಹ ಭಾಗವೊಂದನ್ನು ಸೇರಿಸಿದ್ದರೆ, ಅದನ್ನು ಹೆಕ್ಕಿ ತೆಗೆಯುವುದು ಕಷ್ಟಸಾಧ್ಯ. ಆದರೆ, ಇಂತಹ ಭಾಗಗಳು ಬಹುಪಾಲು ಹಸ್ತಪ್ರತಿಗಳಲ್ಲಿ ಇಲ್ಲದೇ, ಒಂದೋ ಎರಡೋ ಪ್ರತಿಗಳಲ್ಲಿ ಮಾತ್ರ ಕಂಡುಬಂದಾಗ, ಇವು ನಂತರದ ಸೇರುಪಡೆಗಳಿರಬೇಕೆಂಬ ನಿರ್ಧಾರಕ್ಕೆ ಬರಬಹುದಾಗುತ್ತದೆ.

ಹಿಂದೆ ಮುದ್ರಣವು ಇನ್ನೂ ಇಲ್ಲದ ಸಮಯದಲ್ಲಿ, ಪಾರಂಪರಿಕ ಕಾವ್ಯಕಲೆಯು ಇನ್ನೂ ಓದುಗರಲ್ಲಿ ಹೆಚ್ಚು ರೂಢಿಯಿದ್ದ ಸಮಯದಲ್ಲಿ, ಹಸ್ತಪ್ರತಿಗಳಲ್ಲಿ ಒಮ್ಮೊಮ್ಮೆ ಹೀಗೆ ಪ್ರಕ್ಷಿಪ್ತಗಳು ಆಗುತ್ತಿದ್ದು, ಹೇಗೆ ಪಾಠಾಂತರಗಳಿಗೆ ಕಾರಣವಾಗಿದ್ದಿರಬಹುದು ಎಂಬ ವಿವರ ಈ ಪ್ರಾತ್ಯಕ್ಷಿಕೆಯಿಂದ ಮನದಟ್ಟಾಗಿರಬಹುದು ಎಂದು ಭಾವಿಸುವೆ.

ಜೈ ಕುಮಾರವ್ಯಾಸ! ಜೈ ಭಾಮಿನಿ ಚಕ್ರವರ್ತಿ!

-ಹಂಸಾನಂದಿ

--

--

Hamsanandi

ಕನ್ನಡಿಗ,Chomayiphile,Bibliophile,Astrophile,BMKphile, Musicphile,Tyagarajaphile,Agatha-phile, Blogophile,Twitterphile and now a Playwright /play director :-P