ಮಣ್ಣಿನ ಕನಸು

Hamsanandi
4 min readApr 25, 2022

ಶತಾವಧಾನಿ ಡಾ. ಆರ್. ಗಣೇಶ್ ಅವರ ’ಮಣ್ಣಿನ ಕನಸು’ ಕಾದಂಬರಿ ಹೊರಬಂದು ಸುಮಾರು ಒಂದು ತಿಂಗಳಾಗಿದೆ. ಪುಸ್ತಕದಂಗಡಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ ಎಂಬ ಸುದ್ದಿ ನೋಡಿದೆ. ಅದು ಯುಕ್ತವಾಗಿಯೂ ಇದೆ. ಓದುಗರು ಇಂಥ ಕಾದಂಬರಿಗೆ ಈ ಸ್ವಾಗತದ ಪ್ರತಿಕ್ರಿಯೆಯನ್ನು ನೀಡುತ್ತಿರುವುದು ಸಂತೋಷಕರ.

ಶತಾವಧಾನಿ ಡಾ. ಆರ್. ಗಣೇಶ್ ಅವರ ’ಮಣ್ಣಿನ ಕನಸು’ ಕಾದಂಬರಿ

ಕನ್ನಡದಲ್ಲಿ ಹಲವು ಐತಿಹಾಸಿಕ ವಿಷಯಗಳ ಆಧಾರದ ಮೇಲೆ ಬಂದಿರುವಂಥ ಕೆ.ವಿ. ಅಯ್ಯರ್ ಅವರ ಶಾಂತಲಾ, ತರಾಸು ಅವರ ದುರ್ಗಾಸ್ತಮಾನ, ಎಸ್ ಎಲ್ ಭೈರಪ್ಪ ಅವರ ಸಾರ್ಥ, ಮಾಸ್ತಿ ಅವರ ಚೆನ್ನಬಸವನಾಯಕ, ಚಿಕವೀರರಾಜೇಂದ್ರ, ವಸುಧೇಂದ್ರ ಅವರ ತೇಜೋ-ತುಂಗಭದ್ರಾ ಇವೇ ಮೊದಲಾದ ಕಾದಂಬರಿಗಳನ್ನು ಹೇಳುವಾಗ, ಆ ಸಾಲಿನಲ್ಲಿ ಈಗ ಮರೆಯಬಾರದಂತಹ ಸೇರ್ಪಡೆ ಮಣ್ಣಿನ ಕನಸು. ಕನ್ನಡ ಪುಸ್ತಕ ಪ್ರಿಯರು ಓದಲೇಬೇಕಾದ ಒಂದು ಬೃಹತ್ ಕಾದಂಬರಿ.

ಸಂಸ್ಕೃತ ಸಾಹಿತ್ಯದಲ್ಲಿ ಜೊತೆಗೆ ಭಾರತೀಯ ಸಂಸ್ಕೃತಿಯ ಮೂಲ ತತ್ತ್ವಗಳಲ್ಲಿ ಶತಾವಧಾನಿ ಡಾ.ಆರ್. ಗಣೇಶ್ ಅವರ ಆಳ-ಮತ್ತು-ವಿಸ್ತಾರವಾದ ಪಾಂಡಿತ್ಯವು ಬಹುಪಾಲು ಕನ್ನಡ ಓದುಗರಿಗೆ ತಿಳಿದ ವಿಷಯವೇ. ಅದನ್ನು ಅವರ ಅಷ್ಟಾವಧಾನ, ಶತಾವಧಾನಗಳಲ್ಲಿಯೂ, ಅವರ ಅಂಕಣ ಬರಹಗಳಲ್ಲಿಯೂ, ಅವರ ಲೇಖನ ಗ್ರಂಥಗಳಲ್ಲಿಯೂ, ವಿವಿಧ ವಿಷಯಗಳಲ್ಲಿ ಅವರು ನೀಡಿರುವ ಅಸಂಖ್ಯ ಉಪನ್ಯಾಸಗಳಲ್ಲಿಯೂ ಕನ್ನಡ ಓದುಗರು ಓದಿ, ಕೇಳಿ ಮೆಚ್ಚಿದ್ದಾರೆ ಎನ್ನುವುದೇನೂ ಹೊಸ ವಿಷಯವಲ್ಲ. ಕಾದಂಬರಿ ಪ್ರಕಾರಕ್ಕೆ ಅವರ ಬರವಣಿಗೆ ಹೊಸದಾದ್ದರಿಂದ ಈ ಪುಸ್ತಕ ಪ್ರಕಟವಾಗುವ ಮೊದಲೇ ಓದುಗರಲ್ಲಿ ಸಕಾರಣವಾಗಿಯೇ ಕುತೂಹಲವನ್ನು ಮೂಡಿಸಿತ್ತು.

ಶತಾವಧಾನಿ ಡಾ.ಆರ್. ಗಣೇಶರು ಈ ಕಾದಂಬರಿಗೆ ತೆಗೆದುಕೊಂಡಿರುವ ವಸ್ತು ಸುಪ್ರಸಿದ್ಧವೇ. ಸಂಸ್ಕೃತ ಸಾಹಿತ್ಯದ ಓದುಗರಾಗಿದ್ದರೆ, ಪ್ರತಿಜ್ಞಾ ಯೌಗಂಧರಾಯಣ ಮತ್ತು ಸ್ವಪ್ನವಾಸವದತ್ತ ಎಂಬ ಭಾಸನ ನಾಟಕಗಳು, ಮೃಚ್ಛಕಟಿಕವೆಂಬ ಶೂದ್ರಕನ ಪ್ರಕರಣ (ನಾಟಕ, ಪ್ರಕರಣ ಎರಡೂ ರೂಪಕ (ಸ್ಟೇಜ್ ಪ್ಲೇ) ಎಂಬುದರ ಎರಡುವಿಧಗಳು. ಇನ್ನೂ ಹಲವು ಬೇರೆ ಪ್ರಕಾರದ ರೂಪಕಗಳಿವೆ). — ಇವನ್ನುಕೇಳಿಯೋ , ಓದಿಯೋ ಇದ್ದೇ ಇರುತ್ತಾರೆ. ಸಂಸ್ಕೃತ ಸಾಹಿತ್ಯವನ್ನು ಓದದೇ ಹೋದರೂ, ಅಮರ ಚಿತ್ರ ಕಥೆ ಮೊದಲಾದ ಪ್ರಕಾರಗಳಲ್ಲಿಯಾದರೂ ಉದಯನ-ವಾಸವದತ್ತೆಯರ ಕಥೆಗಳನ್ನೂ, ಬುದ್ಧ-ಆಮ್ರಪಾಲಿಯರ ಕಥೆಗಳನ್ನೂ ಹಲವಾರು ಕನ್ನಡ ಓದುಗರು ಓದಿಯೇ ಇರುತ್ತಾರೆ. ಅವುಗಳನ್ನು ಓದಿದ್ದವರಿಗೆ ಈ ಕಾದಂಬರಿಯ ಹಿನ್ನಲೆ ಎಲ್ಲಿದೆ ಎಂದು ತಿಳಿಯುವುದು ಸುಲಭ. ಆದರೆ ಅವುಗಳನ್ನು ಓದಿಲ್ಲದಿದ್ದರೆ, ಇನ್ನೂ ಒಳಿತೇ ಆಯಿತು ಎನ್ನಬಹುದು — ಕಥೆ ಏನಾಗುತ್ತದೆ ಎಂಬ ಕುತೂಹಲ ಇನ್ನೂ ಹೆಚ್ಚಿಗಿರುತ್ತದೆ! ಕಾದಂಬರಿಯ ಹೆಸರು “ಮಣ್ಣಿನ ಕನಸು” ಎಂಬುದು ಕೂಡ ಮೃಚ್ಛಕಟಿಕ ದಲ್ಲಿ ಬರುವ ಮೃತ್ (ಮಣ್ಣು) ಮತ್ತು ಸ್ವಪ್ನವಾಸವದತ್ತ ದಲ್ಲಿ ಬರುವ ಸ್ವಪ್ನ (ಕನಸು) ಈ ಎರಡು ಪದಗಳನ್ನು ಸೇರಿಸಿಯೇ ಕೊಟ್ಟಿರುವಂತಹ ನಾಮಕರಣ.

ಈ ಕಥೆ ನಡೆಯುವುದು ಸುಮಾರು ೨೫೦೦ ವರ್ಷಕ್ಕೂ ಹಿಂದೆ — ಬುದ್ಧ ಮತ್ತೆ ಮಹಾವೀರರು ಬಾಳಿ ಬದುಕಿದ್ದ ಕಾಲದಲ್ಲಿ. ಅವರು ನಡೆದಾಡಿದ ಉತ್ತರ ಭಾರತದ ಭಾಗಗಳಲ್ಲೇ. ಕಥೆಯ ಭೌಗೋಳಿಕ ವಿಸ್ತಾರ ಪಶ್ಚಿಮದ ಉಜ್ಜಯಿನಿಯಿಂದೀಚೆಯ ಗುಜರಾತಿನಿಂದ ಹಿಡಿದು ಪೂರ್ವದಲ್ಲಿ ಇಂದಿನ ಬಿಹಾರದ ವೈಶಾಲಿ, ರಾಜಗೃಹ, ಪಾಟಲಿಗ್ರಾಮ ( ನಂತರ ಪಾಟಲಿಪುತ್ರ ಎಂದು ಪ್ರಖ್ಯಾತವಾದ ನಗರ, ಇಂದಿನ ಪಾಟ್ನಾ) ಗಳವರೆಗೆ, ಉತ್ತರದಲ್ಲಿ ನೇಪಾಳ ಕುರುಕ್ಷೇತ್ರಗಳವರೆಗೆ — ಅಂದರೆ ಹೆಚ್ಚಿನ ಅಂಶ ಇಂದಿನ ಉತ್ತರ ಭಾರತ ಮಧ್ಯಭಾರತ ಭಾಗದಲ್ಲಿ. ಅಲ್ಲಿದ್ದ ಹತ್ತು ಹಲವು ರಾಜರ, ಮತ್ತೆ ಗಣರಾಜ್ಯಗಳ. ಮಹಾಜನಪದಗಳ ರಾಜಕೀಯ-ಸಾಂಸ್ಕೃತಿಕ-ಆರ್ಥಿಕ ಮೊದಲಾದ ಹತ್ತು ಹಲವು ವಿಷಯಗಳನ್ನು ಸುತ್ತುವರೆಯುವಂತಹ, ಆಸಕ್ತಿ ಮೂಡಿಸುವ, ಒಂದು ಎರಡು-ಮೂರು ವರ್ಷಗಳ ಕಾಲದೊಳಗೆ ನಡೆಯುವ ಕಥೆ ಇದರದ್ದು. ಈ ಮೊದಲೇ ಹೇಳಿದ ಮೂರು ನಾಟಕಗಳಲ್ಲದೇ, ಬೃಹತ್ಕಥೆಯಲ್ಲಿ ಬರುವ ಉದಯನನ ಕಥೆಗಳೂ ಕಾದಂಬರಿಯ ಕಥೆಗೆ ಸಾಮಗ್ರಿ ಒದಗಿಸಿರಬಹುದು. ಆ ನಾಟಕಗಳಲ್ಲಿ ಕಾಣಸಿಗದ ಅನೇಕ ವಿಷಯಗಳು ಕಾದಂಬರಿಯಲ್ಲಿ ವಿಷದವಾಗಿ ಚಿತ್ರಿತವಾಗಿ ಹೋಗುತ್ತವೆ. ನಿಜ ಹೇಳಬೇಕೆಂದರೆ ಆ ನಾಟಕಗಳಲ್ಲಿ ಕಂಡುಬರುವ ಕೆಲವು ಪ್ರಮುಖ ದೃಶ್ಯಗಳು ಕಾದಂಬರಿಯಲ್ಲಿ ಕಂಡುಬರುವುದೇ ಇಲ್ಲ. ಇದು ಒಂದು ರೀತಿಯಲ್ಲಿ ಯುಕ್ತವೂ ಆಗಿದೆ. ಏಕೆಂದರೆ ದೃಶ್ಯಕಾವ್ಯವಾದ ನಾಟಕದಲ್ಲಿ ಹಲವು ಅಂಶಗಳು ನಾಟಕೀಯವಾಗಿ , ರಂಗದ ಮೇಲಿನ ಸಾಧ್ಯತೆಗಳಿಗೆ ಅನುಗುಣವಾಗಿ, ಅಥವಾ ಕಟ್ಟುಪಾಡುಗಳಿಗೆ ಅನುವಾಗುವಂತೆ ಇರುವುದು ಸಹಜ. ಕಾದಂಬರಿಯಲ್ಲಿ ಅಂತಹ ವಿಷಯಗಳನ್ನು ನಿರೂಪಿಸುವುದೇ ಬೇರೆ ರೀತಿಯಲ್ಲಿ ಸಾಗಬೇಕು. ಮತ್ತೆ ಕಾದಂಬರಿಕಾರರು ಇಲ್ಲಿ ಬಹಳ ಯಶಸ್ವಿಯಾಗಿಯೂ ಇದ್ದಾರೆ. ಚಾರಿತ್ರಿಕ ಅಂಶಗಳುಳ್ಳ ಕಾದಂಬರಿಗಳು ನಿಮಗೆ ಮೆಚ್ಚುಗೆ ಆಗುವುದಾದರೆ ನೀವಿದನ್ನು ಓದಲೇಬೇಕು.

ಕಥೆಯ ಹಂದರದ ಬಗ್ಗೆ ನಾನು ಇಲ್ಲಿ ಹೆಚ್ಚಿಗೆ ಹೇಳಹೋಗುವುದಿಲ್ಲ. ಆದರೆ ಮುಖ್ಯ ಪಾತ್ರಗಳೆಲ್ಲ ರಕ್ತ-ಮಾಂಸಗಳಿಂದ ತುಂಬಿಕೊಂಡು ಪುಷ್ಟಿಯಾಗಿ ಕಾಣಬರುವ ನಿತ್ಯಜೀವನದ ಪಾತ್ರಗಳಾಗಿದ್ದಾರೆ ಎಂದು ಹೇಳಲೇಬೇಕು. ಆ ಕಾಲದ ಸಾಮಾಜಿಕ ಮತ್ತು ಮತ ಧರ್ಮಗಳ ಅಂಶಗಳು, ಮತ್ತು ವ್ಯಾಪಾರ ವಹಿವಾಟುಗಳ ವಿಚಾರಗಗಳ ಬಗ್ಗೆ ನಿಮಗೆ ಯಾವುದೇ ಶಾಲಾ-ಕಾಲೇಜುಗಳ ಚರಿತ್ರೆಯ ಪುಸ್ತಕಗಳನ್ನು ಓದಿದರೆ ದೊರೆಯುವುದಕ್ಕಿಂತ ಹೆಚ್ಚಿನ ನಿಖರವಾದ, ಮತ್ತು ಸತ್ಯಕ್ಕೆ ಹತ್ತಿರವಾದ ಅಂಶಗಳು ನಿಮಗೆ ಈ ಕಾದಂಬರಿಯಲ್ಲಿ ದೊರೆಯುತ್ತವೆ. ಮತ್ತೆ ಅಂತಹ ಅಂಶಗಳೆಲ್ಲ ಕಥೆಗೆ ಬಹುಪಾಲು ಕಥೆಗೆ ಅತ್ಯವಶ್ಯಕವಾಗಿ, ಪೂರಕವಾಗಿಯೇ ಬಂದಿವೆ. ಉತ್ತರ ಭಾರತದಲ್ಲಿ ಅಂದು ಬಳಕೆಯಲ್ಲಿದ್ದ ಭಾಷೆ, ಉಪಭಾಷೆಗಳು, ಒಳನುಡಿಗಳು ಮೊದಲಾದುವುಗಳ ಪ್ರಸ್ತಾಪ, ಅವುಗಳ ನಡುವೆ ನಡೆಯುತ್ತಿದ್ದ ಸಂವಹನ — ಮೊದಲಾದ ವಿಷಯಗಳೂ ಅಷ್ಟೇ ಸೊಗಸಾಗಿ ಮೂಡಿ ಬಂದಿವೆ. ಅಂದಿನ ಕಾಲದ ಜನಜೀವನ ಶೈಲಿ, ಅವರ ರಂಜನೆಗಿದ್ದ ಕಲಾಪ್ರಕಾರಗಳು, ಅವರ ಊರು-ಕೇರಿಗಳ ವಿನ್ಯಾಸ, ಅವರು ಊರಿಂದೂರಿಗೆ ಹೋಗಬೇಕಾದರೆ ಇರುತ್ತಿದ್ದ ಸಂಚಾರ ಸೌಕರ್ಯಗಳು, ದೇಶ ವಿದೇಶಗಳೊಡನೆ ಅವರಿಗಿದ್ದ ವ್ಯಾಪಾರ ಸಂಬಂಧಗಳು, ಅವರ ಯುದ್ಧ ತಂತ್ರಗಳು — ಇಂತಹ ಹಲವಾರು ವಿಷಯಗಳು ಕಥೆಯ ಎಳೆಯೊಡನೆ ಹಾಸುಹೊಕ್ಕಾಗಿವೆ.

ಶತಾವಧಾನಿಗಳ ಕನ್ನಡ ಶೈಲಿ ಸಾಮಾನ್ಯವಾಗಿಯೇ ಸಂಸ್ಕೃತ ಪದಗಳನ್ನು ಹೆಚ್ಚಾಗಿ ಬಳಸುವಂತಹ ಸಾಂಪ್ರದಾಯಿಕ ಶೈಲಿ. ಈ ಕಾದಂಬರಿಯಲ್ಲಿಅದು ಒಂದು ಕೈ ಮೇಲೇ ಎನ್ನುವಂತಿದೆ. ಅದಕ್ಕೆ ಕಥಾವಸ್ತು, ಕಥೆ ನಡೆದ ಕಾಲ ಮತ್ತೆ ಕಥೆ ನಡೆದ ಪ್ರದೇಶ ಎಲ್ಲವೂ ಕಾರಣವೆನ್ನಬಹುದು. ಹಾಗಾಗಿ ಓದುಗರ ಅನುಕೂಲಕ್ಕೆ ಪುಸ್ತಕದ ಕೊನೆಯಲ್ಲಿ ಪಾರಿಭಾಷಿಕ/ಕಠಿನ ಪದಗಳ ಪಟ್ಟಿಯನ್ನು ಕೊಡಲಾಗಿದೆ. ಅಲ್ಲಿ ಇಲ್ಲದ ಪದಗಳನ್ನು ಸಂದರ್ಭದಿಂದಲೇ ಅರಿಯಬಹುದಾದರು, ಕೆಲವು ಓದುಗರಿಗಾದರೂ ಪದಕೋಶದ ಮೊರೆ ಹೋಗಬೇಕಾಗಬಹುದು ಎಂದು ನನ್ನ ಅನಿಸಿಕೆ (ನಾನು ಪದಕೋಶವನ್ನು ನೋಡಬೇಕಾಗಲಿಲ್ಲ).

ಕೆಲವು ಓದುಗರಿಗೆ, ಕಲೆಯ ಬಗ್ಗೆ, ಸಂಗೀತದ ಬಗ್ಗೆ , ರಾಜಕೀಯ ರಾಜತಂತ್ರಗಳ ಬಗ್ಗೆ, ಇಷ್ಟು ವಾಚ್ಯವಾಗಿ ಹೇಳಬೇಕೇ ಎಂದು ಎನ್ನಿಸಬಹುದು. ಓದಲು, ಒಂದೆರಡು ಕಡೆ ತುಸು ಕ್ಲಿಷ್ಟ ಎಂದೂ ಎನ್ನಿಸಬಹುದು. ಆದರೆ ಕಥೆಯ ನೆಲೆಗೆ ಅಂಥ ವಿಷಯಗಳು ಪರಕೀಯವಾಗಿಲ್ಲ ಎಂದು ಖಂಡಿತವಾಗಿ ಉತ್ತರ ಕೊಡಬಹುದು.ಹಾಗಾಗಿ ಕಾದಂಬರಿಯಲ್ಲಿ ೬೩೦ ಪುಟಗಳಿವೆ ಎಂಬ ಕಾರಣಕ್ಕೆ ಓದುಗರು ಹಿಂಜರಿಯಬೇಕಿಲ್ಲ.ಪ್ರಾಚೀನ ಭಾರತದಲ್ಲಿ ಇದ್ದ ಆಚರಣೆಗಳೆಲ್ಲ ಇಂದಿಗೆ ಒಪ್ಪಿಗೆಯಾಗಬಲ್ಲವೇ ? ಇಲ್ಲವೇ? ಇಂದಿನ ನೆಲೆಯಲ್ಲೂ ಒಳ್ಳೆಯದೆನ್ನಿಸಬಹುದು ಎನ್ನುವುದು ಏನು? ತಪ್ಪು ಎನ್ನಿಸಬಲ್ಲದ್ದು ಏನು? ಪ್ರಭುತ್ವ ಒಳ್ಳೆಯದಿದ್ದಾಗ ಏನಾಗುತ್ತದೆ? ದುರ್ಬಲವಾಗಿದ್ದಾಗ ಏನಾಗುತ್ತದೆ? ನಿರಂಕುಶವಾಗಿ ಹೋದರೆ ಏನಾಗುತ್ತದೆ? ಪ್ರಜಾಪ್ರಭುತ್ವವಿದ್ದಾಗ ಎಂತ ಮೂರ್ಖತನದ ನಿರ್ಧಾರಗಳೂ ಸಮಾಜವಿರೋಧಿ ಎನ್ನಿಸುವಂತೆ, ವ್ಯಕ್ತಿ ವಿರೋಧಿಯಾಗಿ ನಡೆಯಬಹುದು? ಇಂತಹ ನೂರಾರು ವಿಷಯಗಳ ಬಗ್ಗೆ ನಿಮ್ಮ ಮನಸ್ಸನ್ನು ತೆರೆದುಕೊಳ್ಳಲು ಈ ಕಾದಂಬರಿ ಬೆಳಕನ್ನು ಚೆಲ್ಲುತ್ತದೆ. ಇಲ್ಲಿಯವರೆಗೆ ತೆರೆದಿಲ್ಲದ ಒಂದು ಮಹಾದ್ವಾರವನ್ನು ನಿಮಗೆ ತೆರೆಯುತ್ತದೆ.

ನೀವು ಅರ್ಥಶಾಸ್ತ್ರ , ಕಾಮಶಾಸ್ತ್ರ, ನಾಟ್ಯಶಾಸ್ತ್ರ — ಮೊದಲಾದ ಪುಸ್ತಕಗಳ ಹೆಸರನ್ನು ಕೇಳಿರಬಹುದು. ಈ ಪುಸ್ತಕಗಳ ಮುಖ್ಯ ಅಂಶಗಳ ಹೊಳಹನ್ನು ನೀವು ಈ ಕಾದಂಬರಿಯಲ್ಲಿ ಕಾಣಬಲ್ಲಿರಿ. ಸಾಧಾರಣ ಯಾವುದೇ ದೊಡ್ಡ ಕಾದಂಬರಿಯಲ್ಲಿ ಆಗುವಂತೆ ಮೊದಲ ೪೦-೫೦ ಪುಟ ಓದುವ ತನಕ, ಕಥೆಯ ಓಟಕ್ಕೆ ನಿಮ್ಮ ಮನಸ್ಸು ಹೊಂದಿಕೊಳ್ಳುವ ತನಕ ನಿಧಾನವಾಗುವ ಸಾಧ್ಯತೆ ಇದ್ದರೂ, ನಂತರ ನಾಗಾಲೋಟದಿಂದ ಸಾಗುತ್ತದೆ. ಮಗಧ ಸಾಮ್ರಾಜ್ಯವನ್ನು ಕಟ್ಟಲು ಕಾರಣನಾದ ಚಾಣಕ್ಯನ ಹೆಸರನ್ನು ನೀವು ಕೇಳಿರುತ್ತೀರಿ — ಆದರೆ ಅವನಿಗೇ ಗುರುವಾಗಬಲ್ಲಂತಹ ಅಮಾತ್ಯ ಯೌಗಂಧರಾಯಣನ ಪಾತ್ರ ನಿಮಗಿಲ್ಲಿ ಕಣ್ಣಿಗೇ ಕಟ್ಟುತ್ತದೆ. ವೀಣೆ ನುಡಿಸಿ ಆನೆಯನ್ನು ಪಳಗಿಸಬಲ್ಲನೆಂಬ ಕೀರ್ತಿ ಪಡೆದ ರಾಜ ಉದಯನನ ಬಗ್ಗೆ ನೀವು ಕೇಳಿರುತ್ತೀರಿ. ಆದರೆ ಅದರ ಹಿಂದೆ ಅವನು ಮಾಡಿದ್ದಿರಬಹುದಾದ ಸಾಧನೆ ಇಲ್ಲಿ ನಿಮಗೆ ಕಂಡುಬರುತ್ತದೆ. ಹಿಂದೆ ನೀವು ಬಹುಶಃ ಕೇಳೇ ಇಲ್ಲದ, ಪ್ರಾಚೀನ ಭಾರತದ ಬಗ್ಗೆಯ ನೂರಾರು ವಿಷಯಗಳು — ಅಂದಿನ ಜನರ ಊಟ ಉಪಹಾರ ಪಾನೀಯ ವಿಶೇಷಗಳು, ಅವರ ಆಟೋಟಗಳು, ಜೀವನ ದರ್ಶನ ಮೊದಲಾದುವುಗಳು ನಿಮಗೆ ಈ ಕಾದಂಬರಿಯಲ್ಲಿ ತಿಳಿದು ಬರುತ್ತವೆ. ಮತ್ತೆ ಇಂತಹ ವಿಷಯಗಳೆಲ್ಲ ಸಾಧಾರವಾಗಿದ್ದು, ಕವಿ ಕಪೋಲ ಕಲ್ಪಿತವಲ್ಲ ಅನ್ನುವುದನ್ನು ಒಮ್ಮೆ ಒತ್ತಿಹೇಳಬಯಸುತ್ತೇನೆ.

ಪುಸ್ತಕವನ್ನು ಅದರ ಮುಖಪುಟದಿಂದ ಅಳೆಯಬಾರದು ಅನ್ನುವುದು ನಾಣ್ಣುಡಿ. ಆದರೆ ಈ ಪುಸ್ತಕ ಬಹಳ ಸುಂದರವಾಗಿ ಮುದ್ರಿತವಾಗಿದ್ದು (ಸಾಹಿತ್ಯ ಪ್ರಕಾಶನ) ಮುಖಪುಟವನ್ನು ನೋಡಿದರೆ ಕೈಗೆತ್ತಿಕೊಳ್ಳುವಂತಿದೆ. ಎತ್ತಿಕೊಂಡರೆ , ಓದಲೇಬೇಕೆನಿಸುವಂತಿದೆ. ಇಂತಹ ಪುಸ್ತಕವು ಇತರ ಭಾರತೀಯ ಭಾಷೆಗಳಿಗೂ ಅನುವಾದವಾದರೆ ಬಹಳ ಸೊಗಸಾಗಿರುತ್ತದೆ, ಮತ್ತೆ ಇನ್ನೂ ಹೆಚ್ಚು ಸಂಸ್ಕೃತಿ-ಆಸಕ್ತರಿಗೂ ತಲುಪುತ್ತದೆ ಎಂದು ನನಗೆನಿಸಿತು.

ಪುಸ್ತಕಮಿತ್ರರೆ, ಪುಸ್ತಕವನ್ನು ಕೊಳ್ಳಿ. ಓದಿ.

-ಹಂಸಾನಂದಿ

ಕೊ: ಕಾದಂಬರಿಗೆ ತಕ್ಕಂತೆ, ನಾನು ಅದರ ಬಗ್ಗೆ ಬರೆದ ಬರಹದಲ್ಲೂ ಸಂಸ್ಕೃತಮೂಲದ ಪದಗಳು ಸ್ವಲ್ಪ ಹೆಚ್ಚೇ ಇವೆ. ಅದು ಕಾದಂಬರಿಯ ಶೈಲಿಗೂ ಹೊಂದುತ್ತದೆ ಎಂದುಕೊಂಡಿದ್ದೇನೆ

ಕೊ.ಕೊ: ಹೆಚ್ಚಿನ ಪುಸ್ತಕಗಳು ಒಮ್ಮೆ ಓದಿ ಪಕ್ಕಕ್ಕಿಡುವಂಥವಾಗಿರುತ್ತವೆ. ಇನ್ನು ಕೆಲವು ಪುಸ್ತಕಗಳು ಮತ್ತೊಮ್ಮೆ ಮಗದೊಮ್ಮೆ, ಮನಬಂದ ಯಾವುದೋ ಪುಟದಿಂದ ಮತ್ತೆ ಮತ್ತೆ ಓದುವಂಥವಾಗಿರುತ್ತವೆ. ಎರಡನೆಯ ರೀತಿಯ ಪುಸ್ತಕಗಳು ಓದುಗರಿಗೆ ಹೆಚ್ಚು ಮುದ ತರುವಂಥವವು. “ಮಣ್ಣಿನ ಕನಸು” ಕೂಡ ಈ ಎರಡನೆಯ ರೀತಿಯ ಪುಸ್ತಕವೇ.

--

--

Hamsanandi

ಕನ್ನಡಿಗ,Chomayiphile,Bibliophile,Astrophile,BMKphile, Musicphile,Tyagarajaphile,Agatha-phile, Blogophile,Twitterphile and now a Playwright /play director :-P