ಸಂಪೂರ್ಣ ಸಂಕ್ಷೇಪ ರಾಮಾಯಣ

Hamsanandi
3 min readFeb 7, 2024

ವಾಲ್ಮೀಕಿ ಮಹರ್ಷಿ 24000 ಶ್ಲೋಕಗಳ ರಾಮಾಯಣವನ್ನು ಬರೆದ ನಂತರ ಅದು ಭರತವರ್ಷದ ಎಲ್ಲ ಭಾಷೆಗಳಲ್ಲಿಯೂಅದರ ಕಥೆಯನ್ನ ಮತ್ತೆ ಮತ್ತೆ ಹೇಳಿದವರ ಸಂಖ್ಯೆ ನೂರಾರು, ಸಾವಿರಾರು. ಅಷ್ಟೇಕೆ, ಹೊರದೇಶಗಳ ಭಾಷೆಗಳಲ್ಲೂ ರಾಮಾಯಣವು ಮತ್ತೆ ಮತ್ತೆ ಹೇಳಲ್ಪಟ್ಟಿದೆ.

ರಾಮಾಯಣದ ಬಾಲಕಾಂಡದಲ್ಲೇ ನೂರು ಶ್ಲೋಕಗಳ ಸಂಕ್ಷಿಪ್ತ ರಾಮಾಯಣವಿದೆ. ಮಹಾಭಾರತದ ವನಪರ್ವದಲ್ಲಿ 700 ಶ್ಲೋಕಗಳ ರಾಮೋಪಾಖ್ಯಾನವಿದೆ. ಇದಲ್ಲದೆ ಇನ್ನೂ ಮಹಾಭಾರತದಲ್ಲಿ ಮತ್ತೆರಡು ಕಡೆ ರಾಮಾಯಣದ ಪುಟ್ಟ ರೂಪಗಳಿವೆ.

ರಾಮಾಯಣದ ಸುಂದರಕಾಂಡದಲ್ಲಿ, ಹನುಮಂತ ಲಂಕೆಗೆ ಬಂದು ಸೀತೆಯನ್ನು ಕಂಡಾಗ, ತನ್ನ ವಾನರ ರೂಪವನ್ನು ಕಂಡರೆ, ತನ್ನನ್ನೂ ರಾವಣನ ಮಾಯೆಯಿರಬಹುದೆಂದು ಭಾವಿಸಿ ಹೆದರಬಹುದೆಂದು, ಮರದ ಮೇಲೆ ಕುಳಿತು ಅಲ್ಲಿಯವರೆಗೆ ಆದ ರಾಮ ಸೀತೆಯರ ಕಥೆಯನ್ನು 31 ಶ್ಲೋಕಗಳಲ್ಲಿ ಹೇಳುತ್ತಾನೆ. ಅದನ್ನು 9 ಮಾತ್ರಾ ಮಲ್ಲಿಕಾಮಾಲೆಯ ಚೌಪದಿಗಳಲ್ಲಿ ಅನುವಾದಿಸಿ, ಅದರ ಮುಂದಿನ ಕಥೆಯನ್ನು ಮತ್ತೆ 10 ಚೌಪದಿಗಳಲ್ಲಿ ನನ್ನ ಮಾತುಗಳಲ್ಲೇ ಬರೆದು, ಕೊನೆಗೆ ಅಯೋಧ್ಯೆಗೆ ಮರಳುತ್ತಿರುವ ರಾಮನ ಪ್ರಸ್ತಾಪವನ್ನು ಒಳಗೊಳ್ಳುವಂತಹ ಮಂಗಳವೊಂದನ್ನು ಸೇರಿಸಿ, 20 ಚೌಪದಿಗಳ ಈ ಸಂಕ್ಷೇಪರಾಮಾಯಣವನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ಇದು ರಾಮಪಟ್ಟಾಭಿಷೇಕದವರೆಗಿನ ಕಥೆಯನ್ನು ಒಳಗೊಂಡಿದೆ.

ಮಾತ್ರಾಮಲ್ಲಿಕಾಮಾಲೆ ಛಂದಸ್ಸನ್ನು ನೀವು “ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ” ಎಂಬ ಧಾಟಿಯಲ್ಲಿ ಓದಿಕೊಳ್ಳಬಹುದು.

ಓದಿ, ಹಿಡಿಸಿದರೆ ಮಿತ್ರರೊಡನೆ ಹಂಚಿಕೊಳ್ಳಿ

ಹಿರಿಯದಾ ಇಕ್ಷ್ವಾಕು ವಂಶದಲರಸ ದಶರಥನಿದ್ದನು

ಹಿರಿಯ ಪುಣ್ಯವು ಕೀರ್ತಿಯಗಣಿತ ರಥದ ಸೈನ್ಯದ ಒಡೆಯನು

ಅರಸುಗಳೊಳಗ್ಗಳನು ಗುಣದಲಿ ತಪದಲೋ ಋಷಿಸಮನವ

ಅರಸುಕುಲದಲಿ ಜನಿಸಿದವ ತಾನಿಂದ್ರ ಸಮನೋ ಬಲದಲಿ ॥1॥

ಕರುಣೆಯವನದಪಾರ ಹಿಂಸೆಯನೆಂದು ನೆಚ್ಚದ ಗರಿಮೆಯ

ನರಪನಿಕ್ಷ್ವಾಕುಗಳ ಮೊದಲಿಗ ಶುಭಕರನು ಸಿರಿವಂತನು

ಅರಸು ಲಕ್ಷಣದಿಂದ ಮೆರೆವನು ಬುವಿಗೆ ಮಂಗಳಕಾರನು

ಪರರ ನಲಿವಲೆ ನಲಿವ ಲೋಕದ ನಾಲ್ಕೆಡೆಯಲೂ ವಿಶ್ರುತ ॥2||

ಅವನ ಹಿರಿಮಗ ರಾಮ ಚಂದ್ರನಹೋಲ್ವ ಮೊಗದವ ಕಣ್ಮಣಿ

ಅವನೊ ತಿಳಿವಲಿ ಜ್ಞಾನಿ ಬಿಲ್ಲನು ಹಿಡಿದವರಲವ ಮೊದಲಿಗ

ಅವನೆ ಕಾಯ್ವನು ತನ್ನವರನಾಸರೆಯ ಬೇಡುವರೆಲ್ಲರ

ಅವನು ಧರ್ಮವನೆತ್ತಿಹಿಡಿವನು ಹಗೆಗಳನು ಬಲು ಕಾಡುವ ||3||

ದಿಟದ ಹಾದಿಯ ಹಿಡಿದ ವೀರನು ವೃದ್ಧ ತಂದೆಯ ಮಾತನು

ಕಟುವೆನದೆ ಪಾಲಿಸಲು ಹೆಂಡತಿ ತಮ್ಮನೊಡನೆಯೆ ಹೋದನು

ಅಟವಿಯೊಳು ವಾಸಿಸಲು; ಬಯಸಿದ ವೇಷ ತಾಳುವ ರಕ್ಕಸ

ಭಟರು ಕೆಚ್ಚುಳ್ಳವರು ಹಲವರ ತರಿದನಾತನು ಕಾಡೊಳು ||4||

ಜನಸ್ಥಾನದೊಳಾದ ಖರದೂಷಣರ ವಧೆಯನು ಕೇಳಿರೆ

ಮುನಿದ ರಾವಣ ಮಿಗದ ರೂಪದ ಮೋಸವನು ತಾ ಹೂಡುತ

ಮನೆಯೊಳೋರ್ವಳೆ ನೇರ್ಪು ಸೌಶೀಲ್ಯಕ್ಕೆ ಆಗರವೆನಿಸಿದ

ಜನಕಸುತೆ ಸೀತೆಯನು ರಕ್ಕಸನಪಹರಿಸಿ ಸೆಳೆದೊಯ್ದನು ||5||

ಮಡದಿಯನ್ನರಸುತಲಿ ವನದೊಳಗಾತ ಕಪಿ ಸುಗ್ರೀವನ

ಗೆಳೆತನವ ಗಳಿಸಿದನು ವಾಲಿಯ ಸಂಹರಿಸುತಲಿ ರಾಜ್ಯವ

ಉಳಿಸಿಕೊಟ್ಟಿರೆ ಕಪಿಗಳರಸನು ಹಲವು ರೂಪವ ಹೊಂದುವ

ಗಡವಪಡೆಯನು ಕಳುಹಿಸಿದ ಸೀತೆಯನು ಹುಡುಕಿರಿಯೆನ್ನುತ ||6||

ದಿಕ್ಕುದಿಕ್ಕುಗಳಲ್ಲಿ ಸೀತೆಯ ಹುಡುಕ ಹೊರಟಿಹ ಲಕ್ಷಕೂ

ಮಿಕ್ಕಿರುವ ವಾನರರು ಸಿಕ್ಕಿದ ಹಕ್ಕಿ ಹೇಳಿದ ಮಾತನೇ

ಪಕ್ಕನೇ ನಂಬುತ್ತ ಕಳುಹಲು ತಾನು ಯೋಜನ ನೂರನು

ಗಕ್ಕೆನುತ ಹಾರಿದೆನು ಸಾಗರ ದಾಟಿ ಸೀತೆಯ ಕಂಡೆನು ||7||

ರಾಮನಾ ನುಡಿಯಲ್ಲಿ ಮುನ್ನವೆ ನಾನು ತಿಳಿದಿಹ ರೂಪದ

ಪ್ರೇಮದಾ ಸೆಲೆಯನ್ನು ಸಿರಿದೇವಿಯನೆ ಎದುರಲಿ ಕಂಡೆನು

ಸುಮ್ಮನಾಗಿರೆ ಇಷ್ಟು ನುಡಿದಾಮೇಲೆ ಹನುಮನು ಮರದಲಿ

ರಾಮನರಸಿಯು ದಿಟ್ಟಿಯಚ್ಚರಿಯಲ್ಲಿ ಮೇಲಕೆ ನೆಟ್ಟಳು ||8||

ಹಲವು ಕಾಲವು ನೆನೆಯುತಿಹ ಜಾನಕಿಯು ರಾಮನ ಸಂತತ

ಕೇಳಿರಲು ಶ್ರೀರಾಮಚರಿತೆಯ ತುರುಸಿನಿಂದಲೆ ಹರ್ಷದಿ

ಬಲವನೆಡವನು ಮೇಲೆಕೆಳಗಡೆ ಪರಿಕಿಸುತ ತಾ ನೋಡಿರೆ

ಅಲ್ಲಿ ಕಂಡಳು ಸೂರ್ಯನಂತೆಯೆ ಹೊಳೆವ ಹನುಮನ ಮರದಲಿ ||9|

ಏನಿದೇನಿದು! ರಾವಣನ ರಾಕ್ಷಸೀ ಮಾಯೆಯೊ? ನೆಚ್ಚಲೇ?

ಎನ್ನುತಿರೆ ಜಾನಕಿಯ ಮನ ಹನುಮಂತ ಮೆಲ್ಲನೆ ಕಾಲಿಗೆ

ತಾನೆ ನಮಿಸುತ ರಾಮ ನೀಡಿದ ಮುದ್ರೆಯುಂಗುರ ತೋರಲು

ಶಾನೆ ಸಂತಸದಲ್ಲಿ ನಲ್ಲನ ನೆನೆದು ಕಣ್ಣೀರಿಟ್ಟಳು! ॥10॥

ರಾಮನೊಸಗೆಯ ಕೇಳಿ ಸೀತೆಯು ನೀಡೆ ಚೂಡಾಮಣಿಯನು

ರಾಮನಾಮವ ಜಪಿಸಿ ವನವನು ಧ್ವಂಸ ಮಾಡಿರೆ ಹನುಮನು

ತಾಮಸಿಸದೇ ಭಟರು ಎಳೆದೊಯ್ದಿರಲು ರಾವಣನೆದುರಿಗೆ

ನೇಮಿಸಿದನವ ದೂತನಿಗೆ ಅವಮಾನಿಸಲು ಬಾಲಕೆ ಬೆಂಕಿಯ ॥11॥

ರಾಮನಾ ಮಾತೊಂದೆ! ಬಾಣದ ಗುರಿಯು ಒಂದೆಯೆ ಕೇಳಿರಿ!

ರಾಮದೂತನ ಬಲವ ಲೀಲೆಯ ನಿಮ್ಮ ಕಣ್ಣಲೆ ಕಾಣಿರಿ!

ಭೂಮಿಯಿಂದಲೆ ಗಗನದೆಡೆ ಜಿಗಿದಾ ಮಹಾಕಪಿ ಲಂಕೆಯ

ಹೋಮ ಮಾಡಿರೆ ಬೆರಗಿನಲಿ ಹನುಮನಿಗೆ ಜೈಜೈ ಎನ್ನಿರಿ! ॥12॥

ಸಾಗರವ ಹಾರುತ್ತ ಹನುಮನು ಸೇರೆ ವಾನರ ಪಡೆಯನು

ಸಾಗಿದರು ಕಿಷ್ಕಿಂದೆ ಪಟ್ಟಣದೆಡೆಗೆ ಸುದ್ಧಿಯ ತಿಳಿಸಲು

ಬಾಗಿ ನಮಿಸುತ ಮಾತೆ ನೀಡಿದ ಹೆರಳಿನೊಡವೆಯ ಕೊಟ್ಟಿರೆ

ಯೋಗಿಯಾಗಿರಲೇನು! ಕಣ್ಣೆವೆಯೊದ್ದೆಯಾದುದು ರಾಮನ! ॥13॥

ವಾನರರ ಪಡೆಯೊಡನೆ ರಾಮನು ತಲುಪಿ ಕಡಲಿನ ಕರೆಯನು

ಮೌನದಲಿ ಧ್ಯಾನಿಸಿದ ಸಾಗರ ದೇವನನು ಕರುಣಿಸಲಿಕೆ

ಸಾನುರಾಗದಿ ಬರದಿರಲು ರಾಘವನು ತಾ ಶರ ಹೂಡಿರೆ

ತಾನೆ ರೂಪವ ತೋರಿ ಸಾಗರ ಸೇತು ಕಟ್ಟಲು ಕೋರಿದ! ॥14॥

ಸೇತುವೆಯ ದಾಟುತ್ತ ವಾನರ ಸೈನ್ಯ ಲಂಕೆಗೆ ಹೋದುದು

ಮಾತಿಗೇ ನಿಲುಕದಿಹ ಯುದ್ಧವು ಹಲವು ದಿನಗಳು ನಡೆದುದು

ಕೋತಿ ಪಡೆ ರಕ್ಕಸರ ಸೈನ್ಯವ ಬಂಡೆಕಲ್ಲಲೆ ಹೊಸಕಿರೆ

ಭೀತಿಕಾಣದ ರಾವಣನಿಗೋ ರಾಮಬಾಣವೆ ಮರಣವು॥ 15॥

ಕರೆಸಿ ರಾಮನು ಸೀತೆಯನವಳ ಮನಕೆ ಬಂದೆಡೆ ಹೋಗೆನು-

-ತ್ತಿರಲದರ ಆಳವನರಿಯದೆ ಮೈದುನಗೆ ಚಿತೆ ಕೂಡಲೆ

ಉರಿಸೆನುತಲದರೊಳಗೆ ಜಾನಕಿ ಗಟ್ಟಿ ಮನದಲೆ ಹೊಕ್ಕಿರೆ

ಉರಿಯ ತಾಗಿಸದಗ್ನಿದೇವನು ಹರಸಿ ಹೊರಗಡೆ ತಂದನೆ! ॥16॥

ಬಳಿಗೆ ಬಂದು ವಿಭೀಷಣನು ಪುಷ್ಪಕದೊಳಗಡೆಯೆ ಕೂರಿಸಿ

ಕಳಿಸಿ ಕೊಟ್ಟಿರೆ ರಾಮಪರಿವಾರವದು ಹಾರಿರೆ ಬಾನಲಿ

ತಿಳುಹಿ ತೋರಿದ ರಾಮ ಸೀತೆಗೆ ಅವಳ ಹುಡುಕಿದ ದಾರಿಯ

ತಿಳಿಯದೆಯೆ ಶ್ರಮ ತಲುಪಿದರು ಸಾಕೇತಪುರಿಯಲಿ ಝಟ್ಟನೇ ||17||

ಭರತ ಬಂದನು ನಂದಿಗ್ರಾಮದೊಳಾಗ ಪಾದುಕೆಯೊಪ್ಪಿಸೆ

ಕರೆಯುತಲಿ ಕಣ್ಣೀರ ಕೇಳುತಲಣ್ಣ ದಾಟಿದ ಕಷ್ಟವ

ಮರಳಿರಲು ತಾಯಿಯರ ಕಾಣಲು ರಾಜಧಾನಿಗೆ ಬೇಗನೇ

ಹರುಷ ತುಂಬಿದಯೋಧ್ಯೆ ವೈಭವವೆಂತು ಮಾತಲಿ ಪೇಳ್ವುದು? ||18||

ಎತ್ತ ನೋಡಿದರಲ್ಲಿ ತೋರಣ ಎಲ್ಲ ಕಡೆ ಹೂ ಹಾರವು

ಎತ್ತಲೂ ಕೇಳುತಿದೆ ಸೀತಾರಾಮರಿಗೆ ಜೈಕಾರವು

ಅತ್ತಲರಮನೆಯಲ್ಲಿ ನಡೆದಿರೆ ವೇದಘೋಷದ ಅರ್ಚನೆ

ಪಟ್ಟಕೇರಲು ರಾಮ ಸೀತೆಯು ಲೋಕ ಸಂಭ್ರಮಗೊಂಡಿದೆ ||19||

ಮಂಗಳವು ಸಿಂಗಾರಿ ಸೀತೆಗೆ ಮನೆಗೆ ಮರಳಿಹ ರಾಮಗೆ

ತಂಗದಿರನಾ ತಂಪು ನಗೆಯಲೆ ಜಗವ ಗೆಲುವಭಿರಾಮಗೆ

ಸಂಗಡದಲಿಹ ಭರತ ಲಕ್ಷ್ಮಣ ಶತ್ರುಜಯ ಹನುಮಾನಗೆ

ಮಂಗಳವು ತನ್ನಂತರಂಗದ ಭಕ್ತರೆಲ್ಲರ ಕಾಯ್ವಗೆ ||20||

Sri Rama Pattabhisheka — A varna chitra in Mysuru traditional style

--

--

Hamsanandi

ಕನ್ನಡಿಗ,Chomayiphile,Bibliophile,Astrophile,BMKphile, Musicphile,Tyagarajaphile,Agatha-phile, Blogophile,Twitterphile and now a Playwright /play director :-P